ಲೇಬರ್ ವಾರ್ಡಿನ ಮೂರನೇ ಬೆಡ್ಡಿನಲ್ಲಿ
ನರಳುತ್ತಿದ್ದ ತಂದೆಗೆ
ನಾಲ್ಕು ಗುಟುಕು ಹೆಂಡ ಸಾಕಿತ್ತು
ಅವನ ತೊಡೆ ಮುರಿತಕ್ಕೆ ಅಷ್ಟೇ ಸಾಕಿತ್ತು
ಮಗನ ಬಳಿ
ಕಂಬನಿ ಮತ್ತು ಅಸಹಾಯಕತೆ ಅಷ್ಟೇ ಇತ್ತು
ಸಿಸ್ಟರ್ ನಗುತ್ತಾರೆ
ಮತ್ತೆ ಬಂದಿರಾ .. ಹುಚ್ಚಪ್ಪ
ಹೋದೋರು ಬತ್ತಾರಾ …
ಬೆಡ್ಡು ಖಾಲಿ ಇದೆ ನೋಡು
ಮಲಗಿ ಹೋಗು .. ಏನ್ ಭ್ರಮೆನಪ್ಪಾ….
ಹಣ್ಣುಗಳನ್ನು ಅಲ್ಲೇ ಪಕ್ಕದಲ್ಲಿ ಇಡುತ್ತಾನೆ
ಬೆಡ್ ಖಾಲಿ ಅನಿಸುತ್ತಿಲ್ಲ…
ಸೋಲು ಮುಖದ ಕುರುಚಲು ಗಡ್ಡದ ಅಪ್ಪ
ನರಳುತ್ತಲೇ ನಸುನಕ್ಕಂತಾಗುತ್ತದೆ
ತುಂಬಿದ ಕಣ್ಣುಗಳಿಂದ ಯಾರನ್ನೂ ದಿಟ್ಟಿಸದೆ
ಹೊರಟು ಹೋಗುತ್ತಾನೆ…. ಮಗ
ಲೇಬರ್ ವಾರ್ಡಿನ ಮೂರನೇ ಬೆಡ್
ಖಾಲಿ ಅನಿಸುತ್ತಿಲ್ಲ..
*****

ಸಾವು , ಕವಿ ಮತ್ತು ಕವಿತೆ
ಈ ಊರಲ್ಲಿ ಆ ಊರಲ್ಲಿ ಎಲ್ಲೋ ಒಂದ್ಕಡೆ
ಹೂಳಲೇಬೇಕಲ್ಲ
ಮಣ್ಣು ಹೊದ್ದೇ ಮಲಗೋದು ಕೊನೆಗೆ
ಕೀರ್ತಿ ಕವನಗಳು
ಅಲ್ಲಿಯವರೆಗೆ ಬರುವುದೇ ಇಲ್ಲ
ಸಾವಿನ ಗೆಳೆಯ ಖಚಿತವಾಗಿ ಸಿಗುತ್ತಾನೆ
ಸಂದೇಹವಿಲ್ಲ
ಅವನು ತಾರತಮ್ಯ ಮಾಡಲಾರ
ಆದರೆ…
ಕುಶಾಲು ಜನರ ಮಾತುಗಳ ನಡುವೆ
ಅವನಿಗೂ ನಿನಗೂ ಮೌನ ಮಾತ್ರ ದಕ್ಕಿ
ಎದೆ ಭಾರ ಹಾಗೇ ಉಳಿದು ಬಿಡುತ್ತದೆ
ಹೆಚ್ಚು ಹೊತ್ತು ಹೊರಲಾರ ಅವನು
ಒಪ್ಪಂದ ಮೊದಲೇ ಆಗಿರುತ್ತದೆ
ಎತ್ತಿ ಎದೆಗೊತ್ತಿಕೊಂಡು
ಕ್ಷಣದಲ್ಲೇ ಮಣ್ಣಿಗೆ ಒಪ್ಪಿಸಿ
ಖಾಲಿಯಾಗಿ ನಡೆಯುವ ಹುಚ್ಚು ಅನಾಮಿಕ
ಮೂರು ಹಿಡಿ ಮಣ್ಣು ಎಸೆದರೆ ಸಾಕೆಂದು
ಕಾಯುತ್ತಿರುವ
ಅವಸರದ ಬಳಗವನ್ನು ಕಂಡಾಗ
ಸಾವಿಗೂ ನಗು ಬಂದಿರಬಹುದು
ಬದುಕಿಗೆ ಪ್ರತಿ ಕ್ಷಣ ಬಳಲಿದ ಜೀವ
ಈಗ ಹೆಣವಷ್ಟೇ..
ಲಯವಾಗಲು ಅಣಿಯಾಗಿರುವ ಕಪ್ಪಿಟ್ಟಿರುವ
ಮುಖದಲ್ಲಿ
ಕಳೆದು ಹೋದ ಕವಿತೆ ಕಾಣುತ್ತದೆ
ಪೆನ್ನು ಪೇಪರಿಗಾಗಿ ತಡುಕಾಡುವಷ್ಟರಲ್ಲಿ
ಹಿರಿಯ ಬದುಕಿನ ಪದವೊಂದು
ಉಪ್ಪು ಸೊಪ್ಪುಗಳ ಅಡಿಯಲ್ಲಿ
ಕೇವಲ ನೆನಪಿನ ನೆಪವಾಗಿ ಉಳಿಯುತ್ತದೆ
ಹೀಗೆ ..
ಎಷ್ಟೊಂದು ಕವಿತೆಗಳು ಸಿಗುವ ಹಂತದಲ್ಲಿ
ಮಣ್ಣಾಗಿ ಬಿಡುತ್ತವೆಂದು ಗೋಳಾಡುತ್ತಾನೆ ಕವಿ
ನಸು ನಗುವನ್ನಷ್ಟೇ ಚೆಲ್ಲಿ
ಮೌನವಾಗಿ ಮಲಗುತ್ತದೆ ಸಾವು
ಅರಳಿದ ಮಣ್ಣಿನ ಮೇಲೆ ಚೆಲ್ಲಿದ ಹೂಗಳ ಹೊದ್ದು