ನವದೆಹಲಿ :ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದ ನೀಟ್ (NEET-UG) ಪರೀಕ್ಷಾ ಅಕ್ರಮದ ವಿವಾದದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ರಾಜೀನಾಮೆ ಪತ್ರ ರವಾನಿಸಿರುವ ಅವರು, ಕಳೆದ ಹತ್ತು ದಿನಗಳಲ್ಲಿ ನಡೆದ ಬೆಳವಣಿಗೆಗಳಿಂದ ತೀವ್ರ ಬೇಸರವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಆಶೋತ್ತರಗಳನ್ನು ಈಡೇರಿಸಲು ಎಲ್ಲ ರೀತಿಯಲ್ಲೂ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿರುವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪತ್ರದ ಮುಖ್ಯಾಂಶಗಳು ಇಲ್ಲಿವೆ:
‘ವಿದ್ಯಾರ್ಥಿಗಳ ಕನಸು ನನಸಾಗಿಸುವುದು ನಮ್ಮ ಬದ್ಧತೆ’ “ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಯ ಹಿತಕ್ಕಾಗಿ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೇನೆ. ದೇಶದ ಯುವಜನತೆಯ ಆಶಯಗಳು, ಭಾವನೆಗಳು ಹಾಗೂ ನ್ಯಾಯಸಮ್ಮತ ನಿರೀಕ್ಷೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವುದು ನಮ್ಮ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ನೈತಿಕ ಬದ್ಧತೆಯಾಗಿದೆ,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನೀಟ್ ವಿವಾದ ಮತ್ತು ಸರ್ಕಾರದ ಕ್ರಮದ ಬಗ್ಗೆ ವಿವರಣೆ 2026ರ ಮೇ 3ರಂದು ನಡೆದ NEET-UG ಪರೀಕ್ಷೆಯ ಅಕ್ರಮಗಳು ಬೆಳಕಿಗೆ ಬಂದ ತಕ್ಷಣ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಿತು. ಅಲ್ಲದೆ, ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಮೊದಲ ದಿನದಿಂದಲೂ ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಂಡಿದ್ದಾಗಿ ತಿಳಿಸಿರುವ ಅವರು, ಯಾವುದೇ ಪ್ರತಿಭಾವಂತ ವಿದ್ಯಾರ್ಥಿಗೆ ‘ಪರೀಕ್ಷಾ ಮಾಫಿಯಾ’ದಿಂದ ಅನ್ಯಾಯವಾಗಬಾರದು ಎಂಬುದು ತಮ್ಮ ದೃಢಸಂಕಲ್ಪವಾಗಿತ್ತು ಎಂದಿದ್ದಾರೆ.
‘ದಾರಿ ತಪ್ಪಿಸುವ ಯತ್ನದಿಂದ ನೋವಾಗಿದೆ’ ಜುಲೈ 16ರಂದು ಪ್ರಕಟವಾದ ಫಲಿತಾಂಶ ತೃಪ್ತಿದಾಯಕವಾಗಿದ್ದು, ಅನೇಕ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕೆಲವರು ಅಡೆತಡೆಗಳನ್ನು ಸೃಷ್ಟಿಸಲು ಹಾಗೂ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು ತಮಗೆ ತೀವ್ರ ನೋವುಂಟುಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆಗೆ ಅಸಲಿ ಕಾರಣವೇನು? ಜಂತರ್ ಮಂತರ್ ಸೇರಿದಂತೆ ದೇಶದಾದ್ಯಂತ ಉಂಟಾಗಿರುವ ಪರಿಸ್ಥಿತಿಯನ್ನು ಪರಿಗಣಿಸಿ, ರಾಷ್ಟ್ರವಿರೋಧಿ ಶಕ್ತಿಗಳು ಇದರ ದುರುಪಯೋಗ ಪಡೆಯದಂತೆ ತಡೆಯಲು, ದೇಶದ ಏಕತೆಯನ್ನು ಕಾಪಾಡಲು ಮತ್ತು ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ತೊಡಕುಗಳಲ್ಲಿ ಸಿಲುಕದಂತೆ ನೋಡಿಕೊಳ್ಳುವ ಉದ್ದೇಶದಿಂದ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಪತ್ರದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ ಭವಿಷ್ಯದಲ್ಲಿಯೂ ಭಾರತ ಮಾತೆ, ಒಡಿಶಾ ರಾಜ್ಯದ ಜನತೆ ಹಾಗೂ ದೇಶದ ಯುವಜನತೆಯ ಆಶಯಗಳನ್ನು ಈಡೇರಿಸಲು ಸದಾ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
