ಮಂಡ್ಯ: ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ (Mekedatu Balancing Reservoir Project) ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿರುವ ಬೆನ್ನಲ್ಲೇ, ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಮಿಳುನಾಡು ಮುಖ್ಯಮಂತ್ರಿ, ನಟ ಸಿ. ಜೋಸೆಫ್ ವಿಜಯ್ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ತಮಿಳುನಾಡಿನಲ್ಲಿ ನಟ ವಿಜಯ್ ಮುಖ್ಯಮಂತ್ರಿಯಾಗಿದ್ದರೂ ಸಹ ಕರ್ನಾಟಕದ ವ್ಯಾಪ್ತಿಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟುವುದನ್ನು ತಡೆಯಲು ಯಾವುದೇ ರಾಜಕೀಯ ಶಕ್ತಿಯಿಂದ ಸಾಧ್ಯವಿಲ್ಲ” ಎಂದು ಅವರು ಘಂಟಾಘೋಷವಾಗಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಕೇಂದ್ರಕ್ಕೆ ಪರಿಷ್ಕೃತ ವರದಿ (DPR) ಸಲ್ಲಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಸಿಎಂ ವಿಜಯ್, “ಕರ್ನಾಟಕದ ಈ ಕ್ರಮ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ” ಎಂದು ಆರೋಪಿಸಿ, ಯೋಜನೆಯನ್ನು ತಿರಸ್ಕರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಬೆಳವಣಿಗೆಗೆ ಕರ್ನಾಟಕದ ಕಡೆಯಿಂದ ಈಗ ಮೊದಲ ಆಕ್ರೋಶ ವ್ಯಕ್ತವಾಗಿದೆ.
‘ವಿಜಯ್‌ಗೆ ರಾಜಕೀಯ ಕಾನೂನುಗಳ ಅರಿವಿಲ್ಲ’
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, “ನಟ ವಿಜಯ್ ಅವರು ರಾಜಕಾರಣಕ್ಕೆ ಅತ್ಯಂತ ಹೊಸಬರು. ಅವರಿಗೆ ಅಂತರರಾಜ್ಯ ನದಿ ನೀರು ಹಂಚಿಕೆಯ ಕಾನೂನು ಮತ್ತು ಸಾಂವಿಧಾನಿಕ ಅಂಶಗಳ ಬಗ್ಗೆ ಇನ್ನೂ ಸಂಪೂರ್ಣ ಜ್ಞಾನವಿಲ್ಲ ಎನಿಸುತ್ತದೆ. ತಮಿಳುನಾಡು ಕೇವಲ ತನಗೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಕೇಳಲು ಮಾತ್ರ ಅರ್ಹತೆ ಹೊಂದಿದೆ. ನಾವು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದಂತೆ ಅವರ ಪಾಲಿನ ನೀರನ್ನು ಹರಿಸುತ್ತಿದ್ದೇವೆ. ಹೀಗಿರುವಾಗ ನಮ್ಮ ಜಾಗದಲ್ಲಿ ನಾವು ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ಜಲಾಶಯ ನಿರ್ಮಿಸಿಕೊಳ್ಳುವುದನ್ನು ವಿರೋಧಿಸಲು ಅವರಿಗೆ ಯಾವುದೇ ಹಕ್ಕಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಅವರಂತಹ ನೂರು ಜನ ಬಂದರೂ ಡ್ಯಾಂ ನಿಲ್ಲಲ್ಲ’
“ವಿಜಯ್ ಅವರಂತಹ ನೂರು ಜನ ನಾಯಕರು ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾದರೂ ಕರ್ನಾಟಕದ ಗಡಿಯೊಳಗೆ ನಡೆಯುವ ಮೇಕೆದಾಟು ಕಾಮಗಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಕಾವೇರಿ ನಿರ್ವಹಣಾ ಮಂಡಳಿ ಹಾಗೂ ತಜ್ಞರ ಸಮಿತಿಯಾದ ಕೇಂದ್ರ ಜಲ ಆಯೋಗವೇ (CWC) ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ನಾವು ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಯೇ ಮುನ್ನಡೆಯುತ್ತಿದ್ದೇವೆ” ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಬಿಜೆಪಿಯ ಇಬ್ಬಂದಿ ನೀತಿಗೆ ಶಾಸಕ ಲೇವಡಿ
ಇದೇ ವೇಳೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಗೋವಾ ಬಿಜೆಪಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಗಣಿಗ ರವಿಕುಮಾರ್, “ಅಂತರರಾಜ್ಯ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ಯಾವಾಗಲೂ ಇಬ್ಬಂದಿ ನೀತಿ ಅನುಸರಿಸುತ್ತದೆ. ಕರ್ನಾಟಕದಲ್ಲಿ ಒಂದು ತರಹ ಮಾತನಾಡಿದರೆ, ಗೋವಾದಲ್ಲಿ ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಅಲ್ಲಿನ ಬಿಜೆಪಿ ಸರ್ಕಾರವೇ ತಡೆಯೊಡ್ಡುತ್ತದೆ” ಎಂದು ಟೀಕಿಸಿದರು.
ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ನೂತನ ಸರ್ಕಾರ ಮೇಕೆದಾಟು ಯೋಜನೆಗೆ ಕಾನೂನು ಸಮರ ಸಾರಲು ಸಜ್ಜಾಗಿದ್ದರೆ, ಇತ್ತ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ ಎಂದು ಸವಾಲು ಹಾಕಿರುವುದರಿಂದ ಕಾವೇರಿ ಕೊಳ್ಳದಲ್ಲಿ ಮತ್ತೆ ‘ನೀರ್ ದಂಗಲ್’ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.
