ಸಾವಿರಾರು ವರ್ಷಗಳ ಕಾಲ ಜಾತಿಯ ಕಾರಣಕ್ಕೆ ಎಲ್ಲಾ ಅವಕಾಶಗಳಿಂದ ವಂಚಿತರಾಗಿದ್ದ ದಲಿತರಿಗೆ ಮಾತ್ರ ಎಲ್ಲಾ ನಾಗರಿಕ ಹಕ್ಕುಗಳು ಮತ್ತು ರಾಜಕೀಯ ಅವಕಾಶ ಸಿಕ್ಕಿದ್ದು ಮಾತ್ರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿರಂತರ ಮತ್ತು ನಿಸ್ವಾರ್ಥ ನಾಯಕತ್ವದಿಂದ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಸ್ವಾತಂತ್ರ್ಯದ ಮುಖಾಂತರ ನಾವು ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಪಡೆದರೂ, ಇಲ್ಲಿನ ಜಾತಿಗ್ರಸ್ಥ ಮನಸ್ಸುಗಳಿಂದ ಹಾಗು ಪಾಳೆಗಾರಿಕೆಯ ವ್ಯವಸ್ಥೆಯಿಂದ ಮಾತ್ರ ನಾವು ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ರಾಜಕೀಯ ಸ್ವಾತಂತ್ರ್ಯವು ದೊರಕಿದ್ದು ಮಾತ್ರ ಇಲ್ಲಿನ ಪ್ರಬಲ ಜಾತಿಗಳಿಗೆ.

ಭಾರತದ ಸಣ್ಣ ಹಿಂದುಳಿದ ಜಾತಿಗಳು ಹಾಗು ದಲಿತರು ಇಂದಿಗೂ ದೇಶದಲ್ಲಿ ಸೂಕ್ತ ರಾಜಕೀಯ ಮತ್ತು ಅಧಿಕಾರದ ಪ್ರಾತಿನಿದ್ಯಕ್ಕಾಗಿ ದೇಶದ ರಾಜಕೀಯ ಪಕ್ಷಗಳು ಮತ್ತು ಅದರ ಮೇಲ್ಜಾತಿ ನಾಯಕರ ಕಡೆ ಮುಖಮಾಡಿ ಕಾತುರದಿಂದ ಕಾಯುತ್ತಿರುವುದು ಮಾತ್ರ ಕಟುವಾದ ಸತ್ಯ. ಅವಕಾಶಗಳು ಸಿಕ್ಕ ಅತ್ಯಲ್ಪ ಸಮಯದಲ್ಲೇ ದಲಿತರು ತಾವು ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅದರಲ್ಲೂ ಹಣ ಮತ್ತು ಇತರೆ ಸಂಪನ್ಮೂಲಗಳ ಕೊರತೆಯಿದ್ದರೂ, ಕೇವಲ ತಮ್ಮ ಸಾಮರ್ಥ್ಯದಿಂದಲೇ ಸ್ವತಂತ್ರ ನಾಯಕತ್ವ ಮತ್ತು ರಾಜಕಾರಣವನ್ನು ಪ್ರಾರಂಭಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಷೀರಾಮರು ದೇಶವನ್ನೇ ದಿಗ್ಬ್ರೆಮೆಗೊಳಿಸಿದರು! ಎಷ್ಟೇ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿದ್ದರೂ ಈ ಸಮುದಾಯಗಳನ್ನು ಮತ್ತು ಇವರ ನಾಯಕತ್ವವನ್ನು ಒಪ್ಪುವ ಮನಸ್ಥಿತಿ ಮಾತ್ರ ಇನ್ನೂ ಭಾರತೀಯ ಸಮಾಜಕ್ಕಾಗಲಿ ಸಾಂಸ್ಕೃತಿಕ ಶ್ರೇಷ್ಟತೆಯ ವ್ಯಸನಕ್ಕೆ ಬಲಿಯಾಗಿರುವ ಬುದ್ದಿವಂತ ವರ್ಗಗಳಿಗೆ ಬಂದಿಲ್ಲ.

ಸ್ವತಂತ್ರ ಭಾರತದಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹಕ್ಕು ಅಧಿಕಾರಗಳನ್ನು ತಂದು ಕೊಟ್ಟ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ತಮ್ಮ ಜೀವಿತ ಕಾಲದಲ್ಲೇ ರಾಜಕೀಯವಾಗಿ ಮುಗಿಸಿದ ಇಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು, ಸ್ವಾತಂತ್ರ್ಯದ ನಂತರವೂ ತಮ್ಮ ಚಾಳಿಯನ್ನು ಮುಂದುವರಿಸಿಕೊಂಡು ಬರುತ್ತಿವೆ. ಇಂದು ಎರಡನೇಯ ಬಾರಿ ಒಬ್ಬ ದಲಿತ ರಾಜಕಾರಣಿಯ ಹೆಸರು ಪ್ರಧಾನಿ ಹುದ್ದೆಗಾಗಿ ಮುನ್ನಲೆಗೆ ಬಂದಿದೆ. ಮೊದಲನೆಯ ಬಾರಿ ಇದೆ ಕಾಂಗ್ರೆಸ್ ಪಕ್ಷದಲ್ಲಿ 8 ಬಾರಿ ಚುಣಾವಣೆಯಲ್ಲಿ ಗೆದ್ದು ವರ್ಲ್ಡ್ ರೆಕಾರ್ಡ್ ಮಾಡಿದ್ದ ಪ್ರಭಾವಿ ರಾಜಕಾರಣಿ ಬಾಬು ಜಗಜೀವನ್ ರಾಮ್ ಅವರ ಹೆಸರು ಕೇಳಿ ಬಂದಿತ್ತು. 1977 ಮತ್ತು 1979ರಲ್ಲಿ ಎರಡೂ ಬಾರಿಯೂ ಕಾಂಗ್ರೆಸ್ ಪಕ್ಷದಲ್ಲಿದ್ದ ಜಾತಿಗ್ರಸ್ಥ ಮನಸ್ಸುಗಳು ಜಗಜೀವನ್ ರಾಮ್ ಅವರಿಗೆ ಅಡ್ಡಗಾಲಾಗಿ ಕೆಲಸ ಮಾಡಿದ ಪರಿಣಾಮ ಅವರಿಗೆ ಪ್ರಧಾನಿ ಆಗುವ ಅವಕಾಶ ತಪ್ಪಿತ್ತು. ಇದರಿಂದ ಬೇಸತ್ತು ಕೊನೆಗೆ ಅವರು ಪಕ್ಷದಿಂದ ಹೊರಬಂದು Congress for Democracy (CFD) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ನಂತರ ಅದನ್ನು ಜನತಾ ಸರ್ಕಾರದೊಂದಿಗೆ ವಿಲೀನಗೊಳಿಸಿ ಕೊನೆಗೆ ದೇಶದ ಉಪಪ್ರಧಾನಿಯಾಗಿ, “ಈ ದರಿದ್ರ ದೇಶದಲ್ಲಿ ಒಬ್ಬ ಚಮ್ಮಾರ ಯಾವತ್ತೂ ಪ್ರಧಾನಿಯಾಗಲಾರ” ಎಂಬ ನಿರಾಶೆಯ ಮಾತುಗಳನ್ನಾಡುತ್ತಾರೆ.
ವರ್ಣ ಶ್ರೇಷ್ಠತೆಯ ಗೀಳಿರುವ ಅಮೇರಿಕಾದಂತ ದೇಶವು ಕೂಡ ಬಾರಾಕ್ ಒಬಾಮಾರಂತ ಕರಿಯರನ್ನು ತನ್ನ ದೇಶದ ಅತ್ಯನ್ನತ ಸ್ಥಾನವಾದ ಅಧ್ಯಕ್ಷ ಸ್ಥಾನವನ್ನು ನೀಡಿ ದೇಶವನ್ನು ಆಳುವ ಅವಕಾಶವನ್ನು ನೀಡಿದೆ. ಹಾಗೆಯೇ ಒಂದು ಕಾಲದಲ್ಲಿ ಭಾರತವನ್ನು ತನ್ನ ವಸಾಹತು ಮಾಡಿಕೊಂಡು ತನ್ನ ಆಡಳಿತಾವಧಿಯಲ್ಲಿ ತಮ್ಮ ಹೋಟಲ್ ಮತ್ತು ಕ್ಲಬ್ ಗಳಲ್ಲಿ “Indians and Dogs are not allowed” ಎಂದು ನಾಮಫಲಕಗಳನ್ನು ಹಾಕಿ ತಮ್ಮ ವರ್ಣಶ್ರೇಷ್ಠತೆಯ ಗೀಳನ್ನು ಪ್ರದರ್ಶಿಸಿದ ಬ್ರಿಟಿಷರು ಕೂಡ ಇಂದು ಭಾರತೀಯನಾದ ಸುನಾಕ್ ರನ್ನು ತಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯದ ನಂತರ ಅನೇಕ ಪಕ್ಷಗಳು ಅಧಿಕಾರವನ್ಮು ಸ್ಥಾಪಿಸಿ ಆಡಳಿತವನ್ನು ಸಾಧಿಸಲು ಸಾಧ್ಯವಾದರೂ ಇಂದಿನವರೆಗೂ ಯಾವುದೇ ಪಕ್ಷವು ಮಾತ್ರ ತನ್ನದೆ ದೇಶದ ಮೂಲನಿವಾಸಿಗಳಾದ ದಲಿತರನ್ನು ಮಾತ್ರ ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ.
INDIA ಎಂಬ ಮೈತ್ರಿಕೂಟವನ್ನು ಸ್ಥಾಪಿಸಿ BJPಯನ್ನು ಸೋಲಿಸುವ ಸಾಹಸಕ್ಕೆ ಕೈಹಾಕಿರುವ ದೇಶದ BJPಯೇತರ ಪಕ್ಷಗಳು ಚುನಾವಣಾ ತಂತ್ರಗಳು ಮತ್ತು ಸೀಟು ಹಂಚಿಕೆಯ ವಿಷಯಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಆಶ್ಚರ್ಯಕರವಾಗಿ ಪಶ್ಚಿಮ ಬಂಗಾಳದ TMCಯ ಮಮತಾ ಬ್ಯಾನರ್ಜಿಯವರು ಹಾಗು AAPನ ಕೇಜ್ರಿವಾಲ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮುಖಾಂತರ ಮತ್ತೆ ದೇಶದಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇವರಿಬ್ಬರ ಅಭಿಪ್ರಾಯವನ್ನು ಇತರೆ ಪಕ್ಷಗಳು ಮನ್ನಿಸುತ್ತಾವೋ ಇಲ್ಲಾವೋ ಗೊತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷವೂ ಕೂಡ ತಮ್ಮ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ! ಇದರ ನಡುವೆ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಮೊದಲು ಗೆಲ್ಲುವುದರ ಬಗ್ಗೆ ಯೋಚಿಸೋಣ ನಂತರ ಯಾರು ಪ್ರಧಾನಿಯಾಗುತ್ತಾರೆ ಎಂಬುದರ ಬಗ್ಗೆ ಚರ್ಚಿಸೋಣ ಎಂದು ಹೇಳುತ್ತ ತಮ್ಮ ಪಕ್ಷ ಮತ್ತು ನಾಯಕ ನಿಷ್ಠೆಯನ್ನು ಮೆರದಿದ್ದಾರೆ.

ಈ ಹಿಂದೆಯಷ್ಟೆ ಪಂಜಾಬಿನಲ್ಲಿ ದಲಿತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದ ಕಾಂಗ್ರೆಸ್ ಪಕ್ಷ ತಮ್ಮ ಪಕ್ಷದ ಮತ್ತು ತಮ್ಮ ಮೇಲ್ಜಾತಿ ಕಾರ್ಯಕರ್ತರ ಕೆಂಗಣ್ಣಿಗೆ ಬಲಿಯಾಗಿ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿತು! ಹಾಗೆಯೇ ಪಶ್ಚಿಮ ಬಂಗಾಳದಲ್ಲೂ BJPಯು ದಲಿತನನ್ನು ತನ್ನ ಮುಖ್ಯಮಂತ್ರಿಯ ಅಭ್ಯರ್ಥಿ ಎಂದು ಘೋಷಿಸಿದ ಪರಿಣಾಮ ಅಲ್ಲಿನ ಕಮ್ಯೂನಿಸ್ಟ್ ನಾಯಕರು ಹಾಗು ಮತದಾರರು ಕೂಡ ತಮ್ಮ ಕಡುವೈರಿಯಾಗಿದ್ದ ಮಮತಾ ಬ್ಯಾನರ್ಜಿಯವರಿಗೆ ಮತ ಚಲಾಯಿಸಿದ್ದನ್ನು ನಾವು ನೋಡಬಹುದು! ಇದರಿಂದ ನಮಗೆ ತಿಳಿಯುವುದೇನೆಂದರೆ, ಭಾರತದ ಸಮಾಜವಾಗಲಿ ಅಥವಾ ರಾಜಕೀಯ ಪಕ್ಷಗಳ ನಾಯಕರಾಗಲಿ ಅಥವಾ ಆ ಪಕ್ಷಗಳ ಮೇಲ್ಜಾತಿಯ ಕಾರ್ಯಕರ್ತರಾಗಲಿ ಎಲ್ಲಿಯವರೆಗೂ ಮಾನಸಿಕವಾಗಿ ಭಾರತೀಯರಾಗದೆ ಇನ್ನೂ ಜಾತಿಗ್ರಸ್ಥ ಮನಸ್ಥಿತಿಯನ್ನು ಹೊಂದಿರುತ್ತಾರೋ ಅಥವಾ ದಲಿತ- ಹಿಂದುಳಿದ-ಅಲ್ಪಸಂಖ್ಯಾತರು ಪರ್ಯಾಯ ರಾಜಕೀಯ ಶಕ್ತಿಯಾಗುವುದಿಲ್ಲವೋ ಅಲ್ಲಿಯವರೆಗೂ ಈ ದೇಶದಲ್ಲಿ ದಲಿತರು ಪ್ರಧಾನಿಯಾಗುವುದು ಸುಲಭದ ಮಾತಲ್ಲ.
ಏನೇ ಇರಲಿ ಕನಿಷ್ಠ ಈಗಲಾದರೂ ದಲಿತರೂ ಕೂಡ ಪ್ರಧಾನಿಯಾಗಲು ಅರ್ಹರು ಎಂಬುದನ್ನು ಅರ್ಥ ಮಾಡಿಕೊಂಡರಲ್ಲಾ ಅಷ್ಟು ಸಾಕು. ಮಮತಾ ಮತ್ತು ಕೇಜ್ರಿವಾಲರ ಅಭಿಪ್ರಾಯ ಎಲ್ಲಾ ಪಕ್ಷಗಳ ಹಾಗು ಆ ಪಕ್ಷಗಳ ನಾಯಕರು ಹಾಗು ಕಾರ್ಯಕರ್ತರ ಅಭಿಪ್ರಾಯ ಮತ್ತು ಇಚ್ಚೆಯಾಗಲಿ, ದೇಶವು ದಲಿತರ ದೇಶಪ್ರೇಮ ಮತ್ತು ದೇಶದ ಮೇಲಿನ ಕಾಳಜಿ ಏನೆಂಬುದನ್ನು ತಿಳಿಯಲಿಕ್ಕಾದರೂ ಈ ಬಾರಿ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವಂತ ದೇಶಭಕ್ತಿಯ ಕೆಲಸವಾಗಲಿ. ಈ ದೇಶ ಕಟ್ಟುವಲ್ಲಿ ನಮ್ಮ ಬೆವರಿನ ಜೊತೆಗೆ ನಮ್ಮ ಬುದ್ದಿವಂತಿಕೆ ಮತ್ತು ಆಡಳಿತದ ಪಾಲೂ ಇರಲಿ ಎಂದು ಆಶಿಸುತ್ತಾ, ನಾವು ಕೂಡ ಅಮೇರಿಕಾ ಮತ್ತು ಇಂಗ್ಲೆಂಡಿನ ಪ್ರಜೆಗಳ ಹಾಗೆ ಪ್ರಬುದ್ಧತೆಯನ್ನು ತೋರಿಸೋಣ.

ಕಳೆದ ಎರಡು ಅವಧಿಯಲ್ಲಿ ಹಿಂದುತ್ವ ಮತ್ತು ಹಿಂದೂ ಹೆಸರಿನಲ್ಲಿ BJP ಮತ್ತು ಮೋದಿಯವರು ಮಾಡಿದ ಕೆಲಸವನ್ನು ಮತ್ತು ಸಾಧನೆಯನ್ನು ನೋಡಿದ್ದೇವೆ. ಒಮ್ಮೆಯಾದರೂ ನಾವು ಸಾವಿರಾರು ವರ್ಷಗಳ ಶೋಷಣೆ ಮತ್ತು ತಿರಸ್ಕಾರಕ್ಕೆ ಬಲಿಯಾಗಿರುವ ಸಮುದಾಯದ ಎದೆಯೊಳಗಿನ ನೋವು, ಅವಮಾನ, ಸಿಟ್ಟು ಹಾಗು ಅವರ ಆಶಯವು ಈ ದೇಶವನ್ನು ಎತ್ತ ಸಾಗಿಸಬಹುದು ಎಂದು ತಿಳಿಯಲು ಹಾಗು ತಮ್ಮ ಹಾಗೆ ನೋವನ್ನು ಅನುಭವಿಸುತ್ತಿರುವ ಕೋಟ್ಯಾಂತರ ಭಾರತೀಯರ ನೋವಿನ ಜೊತೆಗೆ ಇಡೀ ಭಾರತದ ನೋವಿಗೆ ಸೂಕ್ತ ಪರಿಹಾರವಾಗಬಲ್ಲರೆ ಎಂಬುದನ್ನು ತಿಳಿಯಲು ಆಶಿಸೋಣ.
let’s wait and see ನಾವು ಸಂವೇದನೆಯ ಜೊತೆಗೆ ಪ್ರಬುದ್ಧರಾಗಿದ್ದೀವ ಎಂದು ಕೂಡಾ ಕಂಡುಕೊಳ್ಳೋಣ.
- ಹರಿರಾಮ್. ಎ
ಗೌರವ ಸಂಪಾದಕರು, ಬಿಗ್ ಕನ್ನಡ