ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಅಷ್ಟಾಗಿ ಆಕ್ರಮಣಶೀಲತೆ ಪ್ರದರ್ಶಿಸುವ ಬೌಲರ್ ಅಲ್ಲ. ಸದಾ ಕೂಲ್ ಆಗಿ, ನಿಖರ ಲೈನ್ ಆಂಡ್ ಲೆಂತ್ ಮೂಲಕ ವಿಕೆಟ್ ಪಡೆಯುವ ಹೇಜಲ್‌ವುಡ್, ಕಳೆದ ಋತುವಿನಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಾಗಲೂ ಇಷ್ಟು ಉದ್ವೇಗದಿಂದ ಸಂಭ್ರಮಿಸಿರಲಿಲ್ಲ. ಆದರೆ, ಗುಜರಾತ್ ಟೈಟನ್ಸ್ ವಿರುದ್ಧದ ಮಹತ್ವದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಅವರು ವಿಕೆಟ್ ಪಡೆದು ಸಂಭ್ರಮಿಸಿದ ರೀತಿ ಕಂಡು ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಗುಜರಾತ್ ತಂಡದ ಸ್ಫೋಟಕ ಓಪನರ್ ಜೋಸ್ ಬಟ್ಲರ್!

ಸೇಡಿನ ಮ್ಯಾಚ್‌ಗೆ ಹಿನ್ನೆಲೆ ಏನು?

ಇತ್ತೀಚೆಗಷ್ಟೇ ಲೀಗ್ ಹಂತದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿಗೆ ಭಾರಿ ಮುಖಭಂಗವಾಗಿತ್ತು. ಅಂದು ಅಹಮದಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್ ನಾಯಕ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಇಬ್ಬರೂ ಸೇರಿ ಹೇಜಲ್‌ವುಡ್ ಬೌಲಿಂಗ್ ಅನ್ನು ಮನಬಂದಂತೆ ಚಚ್ಚಿದ್ದರು. ಆ ಪಂದ್ಯದಲ್ಲಿ ಹೇಜಲ್‌ವುಡ್ ತಮ್ಮ ಟಿ20 ವೃತ್ತಿಜೀವನದಲ್ಲೇ ಎರಡನೇ ಅತ್ಯಂತ ಕಳಪೆ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ ಬರೋಬ್ಬರಿ 56 ರನ್ ಬಿಟ್ಟುಕೊಟ್ಟಿದ್ದರು. ಬಟ್ಲರ್ ಅವರ ಬ್ಯಾಟಿಂಗ್ ಅಬ್ಬರ ಹೇಜಲ್‌ವುಡ್ ಅವರ ಲಯವನ್ನೇ ತಪ್ಪಿಸಿತ್ತು.

ಕ್ವಾಲಿಫೈಯರ್ 1 ನಲ್ಲಿ ಸಿಕ್ಕಿತು ‘ಸ್ವೀಟ್ ರಿವೆಂಜ್’!

ಧರ್ಮಶಾಲಾದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ರಜತ್ ಪಾಟಿದಾರ್ (93*) ಅವರ ಅಬ್ಬರದಿಂದ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾದರೂ, ಜೋಸ್ ಬಟ್ಲರ್ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 29 ರನ್ ಗಳಿಸುವ ಮೂಲಕ ಆರ್‌ಸಿಬಿ ಕ್ಯಾಂಪ್‌ನಲ್ಲಿ ಮತ್ತೆ ಆತಂಕ ಮೂಡಿಸಿದ್ದರು.

ಬಟ್ಲರ್ ಕೌಂಟರ್ ಅಟ್ಯಾಕ್ ಮಾಡುತ್ತಿದ್ದ ಈ ಅಪಾಯಕಾರಿ ಸಮಯದಲ್ಲಿ ಬೌಲಿಂಗ್‌ಗೆ ಬಂದ ಜೋಶ್ ಹೇಜಲ್‌ವುಡ್, ತಮ್ಮ ಅದ್ಭುತ ಕರಾರುವಾಕ್ ಎಸೆತದ ಮೂಲಕ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಷ್ಟೇ ಅಲ್ಲ, ಕಳೆದ ಪಂದ್ಯದಲ್ಲಿ ತಮಗೆ ಸಿಕ್ಕಿದ್ದ ತಪರಾಕಿಗೆ ಮೈದಾನದಲ್ಲೇ ಕಿರುಚಾಡುವ ಮೂಲಕ ತಕ್ಕ ಉತ್ತರ ನೀಡಿದರು.

ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷ್

ಸಾಮಾನ್ಯವಾಗಿ ವಿಕೆಟ್ ಬಿದ್ದಾಗ ಕೇವಲ ನಸುನಗುವ ಹೇಜಲ್‌ವುಡ್, ಬಟ್ಲರ್ ವಿಕೆಟ್ ಉರುಳಿಸುತ್ತಿದ್ದಂತೆ ಜೋರಾಗಿ ಅರಚಾಡುತ್ತಾ ಸಂಭ್ರಮಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, “ಹೇಜಲ್‌ವುಡ್ ಅವರನ್ನು ಈ ರೇಂಜ್‌ನಲ್ಲಿ ಕೋಪದಿಂದ ನೋಡಿಯೇ ಇರಲಿಲ್ಲ. ಹಿಂದಿನ ಪಂದ್ಯದ ಸೇಡನ್ನು ಸರಿಯಾಗಿಯೇ ತೀರಿಸಿಕೊಂಡಿದ್ದಾರೆ” ಎಂದು ಆರ್‌ಸಿಬಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಪಂದ್ಯದಲ್ಲಿ ಆರ್‌ಸಿಬಿ 92 ರನ್‌ಗಳ ದೊಡ್ಡ ಅಂತರದಿಂದ ಗೆದ್ದು ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

Leave a Reply

Your email address will not be published. Required fields are marked *