ಚಳಿ ಮತ್ತು ಮಳೆಯ ಅನುಭವವಾಗುವುದು ಮಳೆಗಾಲದಲ್ಲಿ ಮಾತ್ರ. ಮಳೆಗಾಲ ಶುರುವಾಯಿತೆಂದರೆ ಸತ್ತು ಹೋಗಿರುವ ಬೇರುಗಳಿಗೆ ಜೀವ ಬಂದು ಸೊಂಪಾಗಿ ಬೆಳೆದು ಮಧುವಣಗಿತ್ತಿಯಂತೆ ನಳನಳಿಸುತ್ತಿರುತ್ತದೆ.
ಯಾಕೀಗ ಚಳಿ ಮಳೆಯ ಮಾತನಾಡುತ್ತಿದ್ದೇನೆ ಎಂದರೆ ಮುಂಜಾನೆಯಿಂದಲೂ ಜಡಿಮಳೆ ಸುರಿಯುತ್ತಿದೆ.ಈ ಚಳಿಗೆ ಏನಾದರೂ ಬಿಸಿಬಿಸಿ ಅಡುಗೆಯನ್ನು ಮಾಡಿ ಸವಿಯಬೇಕೆಂದು ಮನಸ್ಸು ಬಯಸುತ್ತದೆ.
ಬಿಸಿ ಬಿಸಿ ಮುದ್ದೆಮಾಡಿ ಅದರ ಜೊತೆ ಗೊಡ್ಡು ಖಾರ ಮಾಡಿ ತಿಂದರೆ ಜ್ವರ ಬಂದು ನಾಲಿಗೆ ಕೆಟ್ಟೋಗಿದ್ದರೆ , ಬಾಯಿ ಸಪ್ಪೇ, ಸಪ್ಪೇ, ಅನಿಸಿದರೆ ಗೊಡ್ಡುಖಾರ ತಿನ್ನಿ ಜ್ವರ ಓಡಿಹೋಗುತ್ತೆ.ಬರೀ ಜ್ವರ ಬಂದು ಬಾಯಿ ಕೆಟ್ಟೋಗಿದ್ದರೆ ಮಾತ್ರವಲ್ಲದೆ ಎಲ್ಲರೂ ಸೇವಿಸಬಹುದಾಗಿದೆ.
ಗೊಡ್ಡುಖಾರಕ್ಕೆ ಬೇಕಾಗಿರುವ ಸಾಮಗ್ರಿಗಳ ಪಟ್ಟಿ ಹೀಗಿದೆ.
ಒಣಮೆಣಸಿನಕಾಯಿ
ಬೆಳ್ಳುಳ್ಳಿ
ಜೀರಿಗೆ
ಮೆಣಸು
ಹುಣಸೆಹಣ್ಣು
ಕರಿಬೇವು
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ಬಾಣಲೆಯಲ್ಲಿ 10 ಒಣಮೆಣಸಿನಕಾಯಿಯನ್ನು ಹಾಕಿ ಡ್ರೈರೋಸ್ಟ್ ಮಾಡಿಕೊಂಡು ಪಕ್ಕದಲ್ಲಿಡಿ.
ಅದೇ ಪ್ಯಾನಿಗೆ ಜೀರಿಗೆ , ಮೆಣಸು, ಕರಿಬೇವು, ಹುಣಸೆಹಣ್ಣು, ಹಾಕಿ ಹುರಿದಿಟ್ಟುಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ಅದರ ಜೊತೆಗೆ ರುಚಿಗೆ ತಕ್ಕಷ್ಟು ಕಲ್ಲುಪ್ಪನ್ನು ಸೇರಿಸಿ ತರಿತರಿಯಾಗಿ ರುಬ್ಬಿದರೆ ಗೊಡ್ಡುಖಾರ ಸವಿಯಲು ಸಿದ್ದವಾಗುತ್ತದೆ. ಅದರ ಜೊತೆಗೆ ಯಾವುದಾದರೂ ಕಾಳನ್ನು ಹುರಿದುಕೊಂಡು ಅರ್ಧಂಬರ್ಧ ಬೇಯಿಸಿಕೊಂಡು ತಿಂದರೆ ಬಲು ರುಚಿಯಾಗಿರುತ್ತದೆ.
ಇದು ನಮ್ಮಮ್ಮನ ಕೈರುಚಿ.
