ಸಮಾಜದಲ್ಲಿ ಎಷ್ಟೇ ಬದಲಾವಣೆಗಳಾದರೂ ಕೂಡಾ ಅಲ್ಲಲ್ಲಿ ಮೇಲ್ಜಾತಿ-ಕೀಳು ಜಾತಿ, ನಾನು ಶ್ರೇಷ್ಠ ನೀವೂ ಕನಿಷ್ಟ ಇಂತಹ ಹೀನ ಆಚರಣೆಗಳು ಈಗಲೂ ಚಾಲ್ತಿಯಲ್ಲಿರುವುದು ಕಾಣಬಹುದು. ಇಂಥಹ ಘಟನೆಯ ಕಥಾನಕವೇ ಈ ಹೆಬ್ಬುಲಿ ಕಟ್ ಎಂಬ ಚಿತ್ರ .
ಚಿತ್ರದ ಆರಂಭದಲ್ಲಿ ಗೋಡೆಯ ಮೇಲೆ ಕಾಣುವುದು ಅಸ್ಪಷ್ಟವಾಗಿ “ಹಿಂದೂ ನಾವೆಲ್ಲ ಒಂದು” ಅಂತ, ಚಿತ್ರದ ಕಡೆಗೆ ಅದೇ ಗೋಡೆಯ ಮೇಲೆ ಕಾಣುವುದು “ಹಿಂದೂ ನಾವಲ್ಲ ಒಂದು” ಅಂತ… ಇದರ ಮಧ್ಯದಲ್ಲಿ ಹೆಬ್ಬುಲಿ ಕಟ್ ಅನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.
ಥೇಟ್ ತಮಿಳಿನ ಮೇಕಿಂಗ್ ಫ್ಲೇವರ್, ಥೇಟ್ ಮಲಯಾಳಂ ಮ್ಯೂಸಿಕ್ ಎಸೆನ್ಸ್! ದಲಿತ-ಮುಸ್ಲಿಮರ ಬಾಂದವ್ಯ, ತಳಸಮುದಾಯಗಳ ತಲ್ಲಣಗಳನ್ನು ಇಷ್ಟೊಂದು ತಣ್ಣಗೆ, ಅದೂ ನನ್ನ ಕನ್ನಡದಲ್ಲಿ ಹೇಳಿದ್ದನ್ನು ಬಹುಶಃ ನಾನು ಕಂಡಿದ್ದಿಲ್ಲ.
ಕೋಲಾರದ ಸ್ಲ್ಯಾಂಗ್‌ನಲ್ಲೇ ರಾಯಚೂರು ಭಾಷೆ ಒಪ್ಪಿಸಿದ ಉಮಾ, ಉರಿವ ಕೆಂಡದಂತೆ ನಟಿಸಿದ ಕಾಬ್ಲರ್ ಮಲ್ಲಣ್ಣನ ಪಾತ್ರಧಾರಿ ಮಹದೇವ ಹಡಪದ, ವಿನ್ಯಾ, ರಫೀಕ ಎಲ್ಲರೂ ಭಾರತವನ್ನು ಪ್ರಾತಿನಿಧಿಸುವ ಅಪ್ಪಟ ಜೀವಧಾತುಗಳು…
ಇಲ್ಲಿನ ಚಿತ್ರನಟರ ಮೇಲಿನ ಒಲವಿನ ಮೇಲೆಯೇ ಹಲವಾರು ಚಿತ್ರಗಳು ಬರುತ್ತಿವೆ. ಅದರಲ್ಲಿ ಫೋಟೋ ಮತ್ತು ಹೆಬ್ಬುಲಿ ಕಟ್ ಸಿನಿಮಾಗಳು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತವೆ. ಆದರೆ ಇವೇ ಚಿತ್ರಗಳಲ್ಲಿ ಪ್ರಸ್ತಾಪಿಸಲ್ಪಟ್ಟ ನಟರು ಈ ಚಿತ್ರಗಳ ಬಗ್ಗೆ ಒಂಚೂರೂ ಮಾತನಾಡುವುದಿಲ್ಲ; ಚಿತ್ರಗಳ ಬಗ್ಗೆ ಬಿಡಿ, ಇಲ್ಲಿರುವ ಜಾತಿ ತಾರತಮ್ಯ, ಧರ್ಮಾಧರಿತ ಹಿಂಸೆಯ ವಿರುದ್ಧ ತುಟಿ ಬಿಚ್ಚುವುದೇ ಇಲ್ಲ… ತಮಿಳಿನಲ್ಲಿ, ಮಲಯಾಳಂನಲ್ಲಿ ನಟರು ನೇರವಾಗಿ ಸಾಮಾಜಿಕ ಅಸಮತೋಲನೆಯ ವಿರುದ್ದ ಮಾತನಾಡುತ್ತಾರೆ, ಬೀದಿಗೆ ಇಳಿಯುತ್ತಾರೆ. ಕನ್ನಡದಲ್ಲಿ ಡಾ. ರಾಜ್, ಅಶೋಕ್, ಚೇತನ್ ಅಹಿಂಸಾ ಮತ್ತು ಮೂರು ಮತ್ತೊಬ್ಬರು ಬಿಟ್ಟರೆ ಉಳಿಯುವುದು ಶೂನ್ಯ ಸಂಪಾದನೆ…
