ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಬತ್ತಿ ಹೋಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂಬ ಆಗ್ರಹದ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮ್ಮ ರಾಜ್ಯದ ಜನರಿಗೆ ಕುಡಿಯೋಕೆ ನೀರಿಲ್ಲ, ಹೀಗಿರುವಾಗ ಅವರಿಗೆ (ತಮಿಳುನಾಡಿಗೆ) ನೀರು ಕೊಡಿ ಅಂದರೆ ಹೇಗೆ ಸಾಧ್ಯ?” ಎಂದು ಸಚಿವರು ಖಾರವಾಗಿ ಪ್ರಶ್ನಿಸಿದ್ದಾರೆ. ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಭಾರಿ ಹಾಹಾಕಾರ ಎದುರಾಗುವ ಆತಂಕವಿದೆ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಸ್ತುಸ್ಥಿತಿ ಅರಿಯಬೇಕಿದೆ: ಮುಂಗಾರು ಕೈಕೊಟ್ಟಿರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ. ಕಾವೇರಿ ನೀರನ್ನೇ ನಂಬಿಕೊಂಡಿರುವ ಕೋಟ್ಯಂತರ ಜನರ ಕುಡಿಯುವ ನೀರಿನ ಭವಿಷ್ಯವೂ ಡೋಲಾಯಮಾನವಾಗಿದೆ. ನಮ್ಮ ಡ್ಯಾಂಗಳಲ್ಲಿರುವ ಅಲ್ಪಸ್ವಲ್ಪ ನೀರನ್ನು ಮುಂದಿನ ಬೇಸಿಗೆಯವರೆಗೆ ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇಂತಹ ನೈಜ ವಸ್ತುಸ್ಥಿತಿಯನ್ನು ಅರಿಯದೆ ನೀರು ಬಿಡುವಂತೆ ಆದೇಶ ಮಾಡುವುದು ಅಥವಾ ಒತ್ತಡ ಹೇರುವುದು ಎಷ್ಟು ಸರಿ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರವು ಕರ್ನಾಟಕದ ವಾಸ್ತವಿಕ ಸ್ಥಿತಿಗತಿ ಹಾಗೂ ಜಲಾಶಯಗಳ ನೀರಿನ ಮಟ್ಟದ ನೈಜ ವರದಿಯನ್ನು ಮಂಡಿಸಿ, ರಾಜ್ಯದ ರೈತರು ಹಾಗೂ ಜನರ ಹಿತ ಕಾಯಲು ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *