ಮಂಡ್ಯ: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವ ಬೆನ್ನಲ್ಲೇ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು. ಒಂದು ವೇಳೆ ನೀರು ಬಿಟ್ಟರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಮುಂಗಾರು ಕೈಕೊಟ್ಟರೆ ನಮ್ಮ ಬೆಳೆಗಳಿಗೆ ಹಾಗೂ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ವಿಷಮ ಸ್ಥಿತಿಯಲ್ಲಿ ನೆರೆ ರಾಜ್ಯದ ಒತ್ತಡಕ್ಕೆ ಮಣಿದು ಅಥವಾ ಅಧಿಕಾರಿಗಳ ತಪ್ಪು ಲೆಕ್ಕಾಚಾರದಿಂದ ತಮಿಳುನಾಡಿಗೆ ನೀರು ಹರಿಸಿದರೆ ರೈತ ಸಂಘಟನೆಗಳು ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ.

ರೈತರ ಹಿತವೇ ಮೊದಲ ಆದ್ಯತೆಯಾಗಲಿ: ಕಾವೇರಿ ಕೊಳ್ಳದ ರೈತರ ಹಿತರಕ್ಷಣೆ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಸಂಕಷ್ಟ ಸೂತ್ರವನ್ನು ಸರಿಯಾಗಿ ಪಾಲಿಸದೆ, ನಮ್ಮ ಡ್ಯಾಂಗಳಲ್ಲಿರುವ ಅಲ್ಪಸ್ವಲ್ಪ ನೀರನ್ನು ಬಿಟ್ಟುಕೊಡುವುದು ರಾಜ್ಯದ ರೈತರಿಗೆ ಬಗೆಯುವ ದ್ರೋಹವಾಗಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ವಸ್ತುಸ್ಥಿತಿಯನ್ನು ಸಮರ್ಥವಾಗಿ ಮಂಡಿಸುವಲ್ಲಿ ಸರ್ಕಾರ ವಿಫಲವಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ನಮ್ಮ ರೈತರ ಬೆಳೆಗಳಿಗೆ ನೀರು ಒದಗಿಸುವತ್ತ ಗಮನಹರಿಸಬೇಕು. ಕೇವಲ ರಾಜಕೀಯ ಲೆಕ್ಕಾಚಾರಗಳಿಗಾಗಿ ರೈತರ ಬದುಕಿನ ಜೊತೆ ಚೆಲ್ಲಾಟವಾಡಿದರೆ, ಕಾವೇರಿ ಕೊಳ್ಳದಾದ್ಯಂತ ರೈತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *