ಬೆಂಗಳೂರು: ಮಾರ್ವೆಲ್ (Marvel) ಹಾಗೂ ಹಾಲಿವುಡ್ ಸಿನಿಮಾಗಳನ್ನು ಇಷ್ಟಪಡುವ ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿಯೊಂದು ಇಲ್ಲಿದೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸೂಪರ್ ಹೀರೋ ‘ಸ್ಪೈಡರ್‌ಮ್ಯಾನ್’ ಸರಣಿಯ ಹೊಸ ಚಿತ್ರ ‘ಸ್ಪೈಡರ್ ಮ್ಯಾನ್: ದಿ ಬ್ರಾಂಡ್ ನ್ಯೂ ಡೇ’ (Spider-Man: Brand New Day) ಇದೇ ಜುಲೈ 30 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ವಿಶೇಷವೆಂದರೆ ಈ ಚಿತ್ರ ಕನ್ನಡ ಭಾಷೆಯಲ್ಲೂ ತೆರೆಕಾಣುತ್ತಿದೆ.
ಚಿತ್ರದ ಕಥಾಹಂದರ ಹಾಗೂ ತಾರಾಗಣ:
ಈ ಹೊಸ ಸಿನಿಮಾವು ಹಿಂದಿನ ‘ಸ್ಪೈಡರ್ ಮ್ಯಾನ್ – ನೋ ವೇ ಹೋಮ್’ ಚಿತ್ರದ ಮುಂದುವರೆದ ಭಾಗವಾಗಿದೆ. ಇಡೀ ಜಗತ್ತೇ ಪೀಟರ್ ಪಾರ್ಕರ್ (ಸ್ಪೈಡರ್‌ಮ್ಯಾನ್) ಅನ್ನು ಮರೆತಿದ್ದರೂ, ಆತ ಮಾತ್ರ ತನ್ನವರನ್ನು ಮರೆತಿಲ್ಲ ಎನ್ನುವುದು ಚಿತ್ರದ ಪ್ರಮುಖ ಎಳೆಯಾಗಿದೆ. ತನ್ನ ಹಳೆಯ ಸ್ನೇಹಿತರು ತನ್ನಿಲ್ಲದೆ ಜೀವನದಲ್ಲಿ ಮುಂದೆ ಸಾಗುತ್ತಿರುವುದನ್ನು ನೋಡುವ ಪೀಟರ್, ನಗರಕ್ಕೆ ಎದುರಾಗುವ ಕಣ್ಣಿಗೆ ಕಾಣದಿರುವ ಹೊಸ ಮತ್ತು ಅತ್ಯಂತ ಶಕ್ತಿಶಾಲಿ ಖಳನಾಯಕನ ಬೆದರಿಕೆಯನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಈ ಚಿತ್ರದ ರೋಚಕ ಕಥಾನಕ.

ಈ ಬಹುನಿರೀಕ್ಷಿತ ಚಿತ್ರವನ್ನು ಖ್ಯಾತ ನಿರ್ದೇಶಕ ಡೆಸ್ಟಿನ್ ಡೇನಿಯಲ್ ನಿರ್ದೇಶಿಸುತ್ತಿದ್ದು, ನೆಚ್ಚಿನ ನಟ ಟಾಮ್ ಹಾಲೆಂಡ್ ಪೀಟರ್ ಪಾರ್ಕರ್ ಅಲಿಯಾಸ್ ಸ್ಪೈಡರ್ ಮ್ಯಾನ್ ಆಗಿ ಮತ್ತೆ ಮೋಡಿ ಮಾಡಲು ಸಿದ್ದರಾಗಿದ್ದಾರೆ. ಇವರ ಜೊತೆಗೆ ಝೆಂಡಾಯಾ, ಸ್ಯಾಡಿ ಸಿಂಕ್, ಜಾಕೋಬ್ ಬಟಾಲನ್, ಜಾನ್ ಬರ್ನ್ಡಾಲ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಕನ್ನಡದ ಜೊತೆಗೆ ಹಲವು ಭಾಷೆಗಳಲ್ಲಿ ರಿಲೀಸ್:
ಹಾಲಿವುಡ್ ಚಿತ್ರಗಳಿಗೆ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಕನ್ನಡಿಗರು ತಮ್ಮ ಮಾತೃಭಾಷೆಯಲ್ಲೇ ಅಚ್ಚುಮೆಚ್ಚಿನ ಸಿನಿಮಾವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಚಿತ್ರತಂಡವು ಇಂಗ್ಲಿಷ್ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಭಾರಿ ಸದ್ದು ಮಾಡುತ್ತಿದ್ದು, ಜುಲೈ 30 ರಂದು ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದು ಖಚಿತವಾಗಿದೆ.
