ಬೆಂಗಳೂರು: ಮದುವೆ ಎಂಬುದು ಪತ್ನಿಯ ಸ್ವಾತಂತ್ರ್ಯ ಹಾಗೂ ಅವಳ ಇಚ್ಛೆಯನ್ನು ನಿಯಂತ್ರಿಸುವ ಪರವಾನಗಿಯಲ್ಲ. ಕೇವಲ ಪತಿಯ ಆಜ್ಞೆಗಳನ್ನು ಒಪ್ಪಿ ನಡೆಯುವುದಷ್ಟೇ ಹೆಂಡತಿಯ ಕರ್ತವ್ಯವಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ (Karnataka High Court), ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ನೀಡಿದೆ.
ಪತ್ನಿ ಮತ್ತು ಮಗಳ ಜೀವನಾಂಶಕ್ಕಾಗಿ ತಿಂಗಳಿಗೆ ₹9,000 ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನೆಲಮಂಗಲ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ, ಈ ಕಟು ಮಾತುಗಳನ್ನು ಹೇಳಿದೆ.
ಹೆಂಡತಿ ಉದ್ಯೋಗಿಯಲ್ಲ, ಮದುವೆ ಅಸಮಾನರ ಸಂಬಂಧವಲ್ಲ ವಿಚಾರಣೆ ವೇಳೆ ಅರ್ಜಿದಾರ (ಪತಿ), “ನನ್ನ ಪತ್ನಿ ಮನೆಯ ಕೆಲಸಗಳನ್ನು ಮಾಡುತ್ತಿರಲಿಲ್ಲ, ನನ್ನ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ. ಅಲ್ಲದೇ, ನನ್ನ ಅಥವಾ ಪೋಷಕರ ಅನುಮತಿಯಿಲ್ಲದೆ ತವರು ಮನೆಗೆ ಹೋಗುತ್ತಿದ್ದಳು” ಎಂದು ಆರೋಪಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, “ಪತ್ನಿಯಾದವಳು ಕೇವಲ ಪತಿಯ ಮನೆ ಕೆಲಸ ಮಾಡಲು ಹಾಗೂ ಪೋಷಕರನ್ನು ನೋಡಿಕೊಳ್ಳಲು ನೇಮಕವಾದ ಉದ್ಯೋಗಿಯಲ್ಲ. ತನಗೆ ಮತ್ತು ತನ್ನ ಹೆತ್ತವರಿಗೆ ಹೆಂಡತಿ ಅಡುಗೆ ಮಾಡಬೇಕು, ತನ್ನ ಅನುಮತಿ ಇಲ್ಲದೇ ತವರು ಮನೆಗೆ ಹೋಗಬಾರದು ಎಂಬ ಪತಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಒಪ್ಪಲಾಗದು” ಎಂದು ತಿಳಿಸಿದೆ.
ಅತ್ತೆ-ಮಾವನ ಆರೈಕೆ ಕಡ್ಡಾಯವಲ್ಲ ನ್ಯಾಯಾಲಯವು ಮತ್ತೊಂದು ಮಹತ್ವದ ಅಂಶವನ್ನು ಒತ್ತಿ ಹೇಳಿದ್ದು, “ವಯಸ್ಸಾದ ಪೋಷಕರಿಗೆ ಆರೈಕೆಯ ಅಗತ್ಯವಿದ್ದರೆ, ಅದರ ಪ್ರಾಥಮಿಕ ಜವಾಬ್ದಾರಿ ಅವರ ಸ್ವಂತ ಮಗ ಅಥವಾ ಮಗಳ ಮೇಲಿರುತ್ತದೆಯೇ ಹೊರತು ಅಳಿಯ ಅಥವಾ ಸೊಸೆಯ ಮೇಲಲ್ಲ. ಸೊಸೆ ಮಾಡುವ ಯಾವುದೇ ಆರೈಕೆಯು ಸ್ವಯಂಪ್ರೇರಿತವಾಗಿರಬೇಕು” ಎಂದು ಹೇಳಿದೆ. ಮನೆಯ ಜವಾಬ್ದಾರಿಗಳನ್ನು ಗಂಡ ಮತ್ತು ಹೆಂಡತಿ ಸಮಾನವಾಗಿ ಹಂಚಿಕೊಳ್ಳಬೇಕು. ಮಹಿಳೆಯನ್ನು ಆಕೆಯ ಆಧಾರದ ಮೇಲೆ ಕೀಳಾಗಿ ಕಾಣುವುದು ಮತ್ತು ಆಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಸಂವಿಧಾನದ ಆಶಯಗಳಾದ ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಜೀವನಾಂಶ ಕಡಿತಕ್ಕೆ ನಕಾರ ಪತ್ನಿ ಮತ್ತು ಮಗಳಿಗೆ ನೀಡಬೇಕಾದ ₹9,000 (ಪತ್ನಿಗೆ ₹5,000 ಮತ್ತು ಮಗಳಿಗೆ ₹4,000) ಜೀವನಾಂಶವನ್ನು ಕಡಿತಗೊಳಿಸುವಂತೆ ಪತಿ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. “ಇಬ್ಬರಿಗೆ ದಿನಕ್ಕೆ ತಲಾ ₹150 ಮಾತ್ರ ಆಗುತ್ತದೆ. ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರದ ಹಿನ್ನೆಲೆಯಲ್ಲಿ ಈ ಮೊತ್ತ ಯಾವುದೇ ಕಾರಣಕ್ಕೂ ಹೆಚ್ಚಲ್ಲ” ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.
