ನವದೆಹಲಿ: “ಹಳೆಯ ತಲೆಮಾರು ನಿವೃತ್ತಿಯಾಗಿ, ಹೊಸ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ” ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಗಡ್ಕರಿ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲಿದ್ದಾರೆಯೇ ಎಂಬ ಚರ್ಚೆಗಳು ಶುರುವಾದ ಬೆನ್ನಲ್ಲೇ, ಇದೀಗ ಅವರ ಕಚೇರಿ ಅಧಿಕೃತ ಸ್ಪಷ್ಟನೆ ನೀಡಿದ್ದು, ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ.

ಹೇಳಿಕೆಯ ಹಿಂದಿನ ವಾಸ್ತವವೇನು?

ಸಚಿವರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ನಿತಿನ್ ಗಡ್ಕರಿ ಅವರ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಾಗ್ಪುರದಲ್ಲಿ ನಡೆದ ‘ಅಡ್ವಾಂಟೇಜ್ ವಿದರ್ಭ-ಖಾಸದಾರ್ ಔದ್ಯೋಗಿಕ ಮಹೋತ್ಸವ’ದ (Advantage Vidarbha) ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಾಮಾಜಿಕ ಟ್ರಸ್ಟ್‌ ಹಾಗೂ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯೊಂದರ (AID) ನಾಯಕತ್ವದ ಕುರಿತು ಈ ಮಾತುಗಳನ್ನು ಆಡಿದ್ದರು.

ಗಡ್ಕರಿ ಅಂದು ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಡ್ಕರಿ, ಯುವಜನತೆಯನ್ನು ಈ ಉದ್ಯಮಶೀಲತಾ ಉಪಕ್ರಮದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆಶಿಶ್ ಕಾಳೆ ಅವರನ್ನು ಶ್ಲಾಘಿಸಿದ್ದರು. “ಆಶಿಶ್ ಅವರ ತಂದೆ ನನ್ನ ಸ್ನೇಹಿತರು. ಇದೀಗ ಯುವ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸಿ, ನಾವು ನಿವೃತ್ತರಾಗಬೇಕು. ವಾಹನ ಸುಗಮವಾಗಿ ಓಡಲು ಪ್ರಾರಂಭಿಸಿದಾಗ ನಾವು ಹಿಂದೆ ಸರಿದು ಬೇರೆ ಕೆಲಸಗಳನ್ನು ಮಾಡಬೇಕು” ಎಂದು ನಿತಿನ್ ಗಡ್ಕರಿ ತಿಳಿಸಿದ್ದರು.

ಚರ್ಚೆಗೆ ಗ್ರಾಸವಾಗಿದ್ದೇಕೆ?

ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ನೇರ ನಡೆ-ನುಡಿಗೆ ಹೆಸರಾಗಿರುವ ಗಡ್ಕರಿ ಅವರ ಬಾಯಿಂದ ‘ನಿವೃತ್ತಿ’ ಮತ್ತು ‘ಜವಾಬ್ದಾರಿ ಹಸ್ತಾಂತರ’ ಎಂಬ ಪದಗಳು ಬಂದ ತಕ್ಷಣ, ಅದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಿಜೆಪಿಯ ಆಂತರಿಕ ನಾಯಕತ್ವ ಬದಲಾವಣೆ ಅಥವಾ ಗಡ್ಕರಿ ಅವರ ರಾಜಕೀಯ ನಿವೃತ್ತಿಯ ಮುನ್ಸೂಚನೆ ಇರಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಇದೀಗ ಕಚೇರಿಯ ಸ್ಪಷ್ಟನೆಯಿಂದಾಗಿ ಇದು ಕೇವಲ ಒಂದು ಸಾಮಾಜಿಕ/ಔದ್ಯೋಗಿಕ ಸಂಸ್ಥೆಯ ನಾಯಕತ್ವ ಹಸ್ತಾಂತರದ ಕುರಿತಾದ ಮಾತು ಎಂಬುದು ದೃಢಪಟ್ಟಿದೆ.

Leave a Reply

Your email address will not be published. Required fields are marked *