ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಪ್ರಕರಣದ 14ನೇ ಆರೋಪಿ (A14) ಪ್ರದೋಷ್ ಸಲ್ಲಿಸಿದ್ದ ‘ಮಾಫಿ ಸಾಕ್ಷಿ’ (Approver) ಅರ್ಜಿಯನ್ನು 59ನೇ ಸಿಸಿಹೆಚ್ (CCH) ನ್ಯಾಯಾಲಯ ಪುರಸ್ಕರಿಸಿದೆ. ಇದರಿಂದಾಗಿ ದರ್ಶನ್ ಮತ್ತು ಗ್ಯಾಂಗ್‌ಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಗೋಚರಿಸಿವೆ.
ಏನಿದು ಬೆಳವಣಿಗೆ? ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ಪ್ರದೋಷ್, ತನಗೆ ಕ್ಷಮಾದಾನ ನೀಡಿ ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯಾಂಶಗಳನ್ನು ತಾನು ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಡುವುದಾಗಿ ಆತ ತನ್ನ ಅರ್ಜಿಯಲ್ಲಿ ತಿಳಿಸಿದ್ದ. ಈ ಹಿಂದೆ ಪ್ರಾಸಿಕ್ಯೂಷನ್ ಕೂಡಾ ಇದಕ್ಕೆ ಸಮ್ಮತಿ ಸೂಚಿಸಿತ್ತು. ಇದೀಗ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರದೋಷ್ ಅರ್ಜಿಯನ್ನು ಅಧಿಕೃತವಾಗಿ ಅಂಗೀಕರಿಸಿದೆ.

ಸತ್ಯ ಮುಚ್ಚಿಟ್ಟರೆ ಹುಷಾರ್: ಕೋರ್ಟ್ ಎಚ್ಚರಿಕೆ ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಪ್ರದೋಷ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದೆ. “ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಗಮನದಲ್ಲಿರುವ ಪ್ರತಿಯೊಂದು ಸತ್ಯವಾದ ಅಂಶಗಳನ್ನೂ ನ್ಯಾಯಾಲಯದ ಮುಂದೆ ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಬೇಕು. ಒಂದು ವೇಳೆ ಯಾವುದೇ ಸತ್ಯವನ್ನು ಮುಚ್ಚಿಟ್ಟರೆ, ನಿಮಗೆ ನೀಡಲಾಗಿರುವ ಮಾಫಿ ಸಾಕ್ಷಿ ಸ್ಥಾನವನ್ನು ರದ್ದುಪಡಿಸಿ, ಮತ್ತೆ ಆರೋಪಿಯನ್ನಾಗಿಯೇ ಪರಿಗಣಿಸಲಾಗುವುದು” ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಿದೆ. ಈ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್‌ಗೆ ರವಾನಿಸಲು ಸೂಚಿಸಲಾಗಿದೆ.
ದರ್ಶನ್‌ಗೆ ಭಾರೀ ಹಿನ್ನಡೆ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಪರ ವಕೀಲರು ಈ ಮುನ್ನ ತೀವ್ರ ಯತ್ನ ನಡೆಸಿದ್ದರು. ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೂ ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಕೋರಿದ್ದರಾದರೂ, ಸೆಷನ್ಸ್ ಕೋರ್ಟ್ ಅದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸಹ-ಆರೋಪಿಯು ಮಾಫಿ ಸಾಕ್ಷಿಯಾಗುವುದನ್ನು ಆಕ್ಷೇಪಿಸುವ ಹಕ್ಕು ಮತ್ತೊಬ್ಬ ಆರೋಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಇತ್ತೀಚೆಗಷ್ಟೇ ದರ್ಶನ್ ಅರ್ಜಿಯನ್ನು ವಜಾಗೊಳಿಸಿತ್ತು.
ಇದೀಗ ಕೋರ್ಟ್ ಅಧಿಕೃತವಾಗಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಿರುವುದರಿಂದ, ಘಟನೆಯ ದಿನ ನಡೆದಿದ್ದೇನು? ಕೊಲೆಯಲ್ಲಿ ದರ್ಶನ್ ಪಾತ್ರವೇನು? ಸಾಕ್ಷ್ಯ ನಾಶಕ್ಕಾಗಿ ಹಣದ ವ್ಯವಹಾರ ಹೇಗಾಯ್ತು? ಎಂಬೆಲ್ಲಾ ಮಹತ್ವದ ವಿಚಾರಗಳು ನ್ಯಾಯಾಲಯದ ಮುಂದೆ ಅಧಿಕೃತವಾಗಿ ದಾಖಲಾಗಲಿವೆ. ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ದರ್ಶನ್ ಮತ್ತು ಇತರ ಆರೋಪಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.
