ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಮತ್ತು ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ, ಕಿರುಕುಳ ಹಾಗೂ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ‘ಫೀನಿಕ್ಸ್’ ಎಂಬ ಹೊಸ ಸಿನಿಮಾ ನಿರ್ಮಾಣದ ನೆಪದಲ್ಲಿ ಬರೋಬ್ಬರಿ 3.85 ಕೋಟಿ ರೂಪಾಯಿಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರಾದ ಭಾಸ್ಕರ್ ಶೆಟ್ಟಿ, ವಾಸುದೇವರೆಡ್ಡಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವವರು ಜಂಟಿಯಾಗಿ ಈ ದೂರು ನೀಡಿದ್ದಾರೆ. ಸಿನಿಮಾ ನಿರ್ಮಾಣದ ಉದ್ದೇಶದಿಂದ ಓಂ ಪ್ರಕಾಶ್ ರಾವ್ ಅವರು ಹಂತ-ಹಂತವಾಗಿ ಹಣ ಪಡೆದುಕೊಂಡಿದ್ದರು. ಇದರಲ್ಲಿ ವಾಸುದೇವ್ ಅವರಿಂದ 3 ಕೋಟಿಗೂ ಅಧಿಕ ಹಾಗೂ ಭಾಸ್ಕರ್ ಶೆಟ್ಟಿ ಅವರಿಂದ ಸುಮಾರು 40 ಲಕ್ಷ ರೂಪಾಯಿಗಳನ್ನು ಪಡೆಯಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

  • ಹಣ ಪಡೆದ ಬಳಿಕ ಸಿನಿಮಾ ಕೆಲಸಗಳನ್ನು ಆರಂಭಿಸದೆ, ಕೊಟ್ಟ ಹಣವನ್ನೂ ಹಿಂತಿರುಗಿಸದೆ ಓಂ ಪ್ರಕಾಶ್ ರಾವ್ ಸತಾಯಿಸುತ್ತಿದ್ದರು ಎನ್ನಲಾಗಿದೆ.
  • ಹಣ ವಾಪಸ್ ಕೇಳಲು ಅವರ ಮನೆಗೆ ತೆರಳಿದ್ದಾಗ, ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
  • ಹಲವು ಬಾರಿ ಹಣ ಮರಳಿಸುವಂತೆ ಕೇಳಿಕೊಂಡರೂ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನೊಂದವರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಸದ್ಯ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಈ ವಂಚನೆ ಪ್ರಕರಣವು ಸ್ಯಾಂಡಲ್‌ವುಡ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Leave a Reply

Your email address will not be published. Required fields are marked *