ಇಂಗ್ಲೆಂಡ್ ಕ್ರಿಕೆಟ್ ತಂಡದ ವೈಟ್-ಬಾಲ್ (ಸೀಮಿತ ಓವರ್‌ಗಳ) ಮೆಂಟರ್ ಆಗಿ ಆ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ನೇಮಕಗೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆ.ಎಲ್. ರಾಹುಲ್ ಅವರು ಪೀಟರ್ಸನ್ ಅವರ ಕಾಲೆಳೆದಿದ್ದು, ಅವರ ಇನ್ಸ್‌ಟಾಗ್ರಾಮ್ ಕಮೆಂಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ರಾಹುಲ್ ಕೇಳಿದ್ದೇನು? ಮುಂಬರುವ 2027ರ ಏಕದಿನ ವಿಶ್ವಕಪ್ ಅನ್ನು ಗುರಿಯಾಗಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು (ECB) ಪೀಟರ್ಸನ್ ಅವರನ್ನು ಮೆಂಟರ್ ಆಗಿ ನೇಮಿಸಿದ ವಿಚಾರವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಹಂಚಿಕೊಂಡಿತ್ತು. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಕನ್ನಡಿಗ ಕೆ.ಎಲ್. ರಾಹುಲ್, “ಈ ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್ ರಜೆಯೂ ಸೇರಿಯೇ ಇದೆಯಾ? (Is Maldives holiday included in the package?)” ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪೀಟರ್ಸನ್ ಕೂಡ ನಗುವಿನ ಎಮೋಜಿಗಳನ್ನು ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಏನಿದು ಮಾಲ್ಡೀವ್ಸ್ ಕನೆಕ್ಷನ್? ರಾಹುಲ್ ಈ ರೀತಿ ತಮಾಷೆ ಮಾಡಲು ಕಾರಣ ಐಪಿಎಲ್ 2025ರ (IPL 2025) ಆವೃತ್ತಿ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆವಿನ್ ಪೀಟರ್ಸನ್ ಮೆಂಟರ್ ಆಗಿದ್ದರು. ಟೂರ್ನಿಯ ಮಧ್ಯದಲ್ಲೇ ಅವರು ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್‌ಗೆ ರಜೆಯ ಮಜಾ ಸವಿಯಲು ತೆರಳಿದ್ದರು. ಆಗಲೂ ಸಹ “ಮೆಂಟರ್ ಕೆಲಸವೆಂದರೆ ಐಪಿಎಲ್ ಮಧ್ಯದಲ್ಲಿ ಎರಡು ವಾರಗಳ ಕಾಲ ಮಾಲ್ಡೀವ್ಸ್‌ಗೆ ಪ್ರವಾಸ ಹೋಗುವುದು” ಎಂದು ರಾಹುಲ್ ತಮಾಷೆ ಮಾಡಿದ್ದರು. ಇದೀಗ ಅದೇ ಹಳೆಯ ವಿಚಾರವನ್ನು ಇಟ್ಟುಕೊಂಡು ರಾಹುಲ್ ಮತ್ತೊಮ್ಮೆ ಪೀಟರ್ಸನ್ ಅವರನ್ನು ರೇಗಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಸಾಥ್ ರಾಹುಲ್ ಅವರ ಕಮೆಂಟ್ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಅಧಿಕೃತ ಖಾತೆಯಿಂದಲೂ ಪೀಟರ್ಸನ್‌ಗೆ “ಮೆಂಟರ್ ಅಂದರೆ ಏನು?” ಎಂದು ತಮಾಷೆಯಾಗಿ ಪ್ರಶ್ನಿಸಿ ಕಮೆಂಟ್ ಮಾಡಲಾಗಿದೆ. ಇವರ ಈ ಆನ್‌ಲೈನ್ ಸಂಭಾಷಣೆ ಕ್ರಿಕೆಟ್ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ.
12 ವರ್ಷಗಳ ಬಳಿಕ ಇಂಗ್ಲೆಂಡ್ ಪಾಳಯಕ್ಕೆ ಪೀಟರ್ಸನ್ ಸುಮಾರು 12 ವರ್ಷಗಳ ಬಳಿಕ ಪೀಟರ್ಸನ್ ಇಂಗ್ಲೆಂಡ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಾರೆ. ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಅವರ ಮಾರ್ಗದರ್ಶನದ ಬಳಗದಲ್ಲಿ ಪೀಟರ್ಸನ್ ಕೆಲಸ ಮಾಡಲಿದ್ದು, ಮುಂಬರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ 2027ರ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
