ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಚಾಮರಾಜನಗರ ಜಿಲ್ಲೆಯ ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದ್ದು, ಪ್ರಕರಣದ ಬಗ್ಗೆ ಕೂಲಂಕಷ ತನಿಖೆಗೆ ಆದೇಶಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಹನೂರಿನ ಅರಣ್ಯ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ವಾಸ್ತವಾಂಶ ತಿಳಿಯಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
“ಘಟನೆಯ ಬಗ್ಗೆ ಬೆಳಗಿನ ಜಾವವೇ ನನಗೆ ಮಾಹಿತಿ ಬಂದಿದೆ. ಅರಣ್ಯ ಪ್ರದೇಶದಲ್ಲಿ ನಡೆದಿರುವ ಈ ಗುಂಡಿನ ಚಕಮಕಿಯಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಬಂದೂಕು ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ,” ಎಂದು ಅವರು ಹೇಳಿದ್ದಾರೆ.
ಏನಿದು ಘಟನೆ?
ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಅರಣ್ಯ ವಲಯದಲ್ಲಿ ಶನಿವಾರ ಮುಂಜಾನೆ ಅರಣ್ಯ ಸಿಬ್ಬಂದಿ ಮತ್ತು ಶಂಕಿತ ಬೇಟೆಗಾರರ ನಡುವೆ ಎದುರಾಬದುರು ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದರು. ಮೃತರ ಬಳಿ ಜಿಂಕೆ ಮಾಂಸ ಹಾಗೂ ನಾಡಬಂದೂಕು ಇತ್ತು ಮತ್ತು ಅವರು ಮೊದಲು ನಮ್ಮ ಮೇಲೆ ಗುಂಡು ಹಾರಿಸಲು ಯತ್ನಿಸಿದಾಗ ಸ್ವರಕ್ಷಣೆಗಾಗಿ ಗುಂಡು ಹಾರಿಸಿದೆವು ಎಂಬುದು ಅರಣ್ಯ ಸಿಬ್ಬಂದಿಯ ವಾದ.
ಆದರೆ, ಮೃತರು ಬೇಟೆಗಾರರಲ್ಲ, ಅವರು ದನ ಮೇಯಿಸಲು ಮತ್ತು ಕಾಡಿನತ್ತ ಹೋಗಿದ್ದ ಅಮಾಯಕರು. ಉದ್ದೇಶಪೂರ್ವಕವಾಗಿಯೇ ಅಧಿಕಾರಿಗಳು ನಕಲಿ ಎನ್ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅರಣ್ಯ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ, ತೀವ್ರ ಪ್ರತಿಭಟನೆ ನಡೆಸಿದ್ದರು. ಇದೀಗ ಸರ್ಕಾರದ ಈ ತನಿಖೆಯ ಆದೇಶವು, ಸತ್ಯಾಂಶವನ್ನು ಹೊರತರುವ ನಿರೀಕ್ಷೆ ಹುಟ್ಟುಹಾಕಿದೆ.
