ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿಕ್ರಿ ಕಲಾನ್ ಎಂಬ  ಪ್ರದೇಶದ ಸಿಎನ್‌ಜಿ ಸ್ಟೇಷನ್‌ ನಲ್ಲಿ ಬುಧವಾರದಂದು ಟ್ರಕ್‌ ಗೆ ಸಂಕುಚಿತ ನೈಸರ್ಗಿಕ ಅನಿಲದಿಂದ(Compressed natural gas)  ಇಂಧನ ತುಂಬಿಸುವ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿ,ಭೀಕರ ದುರಂತವೊಂದು ಸಂಭವಿಸಿದ್ದು, ಸಿಎನ್‌ಜಿ (CNG) ಅನಿಲ ತುಂಬಿಸುವ ವೇಳೆ ಟ್ರಕ್‌ನ ಗ್ಯಾಸ್ ಟ್ಯಾಂಕ್ ಏಕಾಏಕಿ ಸ್ಫೋಟಗೊಂಡಿದೆ. ಈ ಭೀಕರ ಅವಘಡದಲ್ಲಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೆಹಲಿಯ ಸಿಎನ್‌ಜಿ ಬಂಕ್‌ವೊಂದಕ್ಕೆ ಟ್ರಕ್ ಗ್ಯಾಸ್ ತುಂಬಿಸಲು ಬಂದಿದ್ದಾಗ ಈ ಘಟನೆ ನಡೆದಿದೆ. ಸಿಬ್ಬಂದಿ ಟ್ರಕ್‌ಗೆ ಅನಿಲ ತುಂಬಿಸುತ್ತಿದ್ದ ವೇಳೆ, ಭಾರಿ ಶಬ್ದದೊಂದಿಗೆ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಟ್ರಕ್‌ನ ಭಾಗಗಳು ಛಿದ್ರಛಿದ್ರವಾಗಿ ಹಾರಿಬಿದ್ದಿದ್ದು, ಬಂಕ್‌ನಲ್ಲಿದ್ದ ಸಿಬ್ಬಂದಿ ಹಾಗೂ ಇತರ ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ರಕ್ತದೋಕುಳಿಯೇ ಹರಿದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿರುವ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತನಿಖೆ ಚುರುಕು: ಪೊಲೀಸರು ಬಂಕ್‌ನ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಟ್ರಕ್‌ನ ಸಿಎನ್‌ಜಿ ಸಿಲಿಂಡರ್ ಅವಧಿ ಮುಗಿದಿತ್ತೇ? ಅಥವಾ ಅತಿಯಾದ ಒತ್ತಡದಿಂದ ಸ್ಫೋಟಗೊಂಡಿತೇ ಎಂಬ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *