ಬೆಂಗಳೂರು: ಸಾರಿಗೆ ಬಸ್‌ಗಳ ಮೇಲೆ ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಸಾರ್ವಜನಿಕರು ಮತ್ತು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸಚಿವ ರಾಮಲಿಂಗಾರೆಡ್ಡಿ ಅವರು ಬಸ್‌ಗಳಲ್ಲಿ ಗುಟ್ಕಾ ಪ್ರಚಾರಕ್ಕೆ ಬ್ರೇಕ್ ಹಾಕುವ ಮಹತ್ವದ ಆದೇಶ ಹೊರಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ವಿಮಲ್, ಆರ್‌ಎಂಡಿನಂತಹ ಗುಟ್ಕಾ ಬ್ರಾಂಡ್‌ಗಳ ಜಾಹೀರಾತುಗಳನ್ನು ದೊಡ್ಡದಾಗಿ ಅಂಟಿಸಲಾಗಿತ್ತು. ಇದನ್ನು ವಿರೋಧಿಸಿ ‘ಯುವ ಕರ್ನಾಟಕ’ ಸೇರಿದಂತೆ ಹಲವು ಸಂಘಟನೆಗಳು ಮೆಜೆಸ್ಟಿಕ್ ಮತ್ತು ಇತರ ನಿಲ್ದಾಣಗಳಲ್ಲಿ ಬಸ್‌ಗಳ ಮೇಲಿದ್ದ ಪೋಸ್ಟರ್‌ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದ್ದವು.

ಸರೊಗೇಟ್ಜಾಹೀರಾತುಗಳ ತಂತ್ರ

ತಂಬಾಕು ಕಂಪನಿಗಳು ನೇರವಾಗಿ ಗುಟ್ಕಾ ಅಥವಾ ಸಿಗರೇಟ್ ಜಾಹೀರಾತು ನೀಡುವಂತಿಲ್ಲ . ಹೀಗಾಗಿ ಅವರು ‘ಏಲಕ್ಕಿ’ ಅಥವಾ ‘ಪಾನ್ ಮಸಾಲಾ’ ಹೆಸರಿನಲ್ಲಿ ಜಾಹೀರಾತು ನೀಡುತ್ತಿದ್ದರು. ಇದು ಪರೋಕ್ಷವಾಗಿ ತಂಬಾಕು ಸೇವನೆಯನ್ನು ಉತ್ತೇಜಿಸುತ್ತದೆ ಎಂಬುದು ತಜ್ಞರ ಮತ್ತು ಸಾರ್ವಜನಿಕರ ಪ್ರಬಲ ವಾದವಾಗಿತ್ತು.ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಸ್ಪಷ್ಟನೆ ನೀಡಿ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ:

ಜಾಹೀರಾತು ತೆರವು: ತಂಬಾಕು ಪ್ರೇರಿತ ಎಲ್ಲಾ ಪೋಸ್ಟರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

40% ಮಿತಿಯ ನಿಯಮ: ಬಸ್‌ನ ಬಾಹ್ಯ ಭಾಗದ ಶೇ. 40 ಕ್ಕಿಂತ ಹೆಚ್ಚು ಜಾಗವನ್ನು ಜಾಹೀರಾತಿಗೆ ಬಳಸುವಂತಿಲ್ಲ. ಇಡೀ ಬಸ್ಸನ್ನು ಜಾಹೀರಾತಿನಿಂದ ಮುಚ್ಚುವುದು ನಿಯಮಬಾಹಿರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದಾಯದ ಅನಿವಾರ್ಯತೆ: ಸಾರಿಗೆ ಸಂಸ್ಥೆಗಳಿಗೆ ಜಾಹೀರಾತಿನಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ (ಉದಾಹರಣೆಗೆ ಬಿಎಂಟಿಸಿಗೆ ವರ್ಷಕ್ಕೆ ಸುಮಾರು 60 ಕೋಟಿ ರೂ.). ಆದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ಹಾನಿಕಾರಕ ಉತ್ಪನ್ನಗಳ ಪ್ರಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

Leave a Reply

Your email address will not be published. Required fields are marked *