ಬೆಂಗಳೂರು: ಉತ್ತರ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ (PNB) ಶಾಖೆಯೊಂದರಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಗರಣವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈಗ ಯಾರು ರಾಜೀನಾಮೆ ಕೊಡ್ತಾರೆ?

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. “ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್‌ನಲ್ಲಿಯೇ 17 ಕೋಟಿ ರೂ. ಫೇಕ್ ನೋಟುಗಳು ಪತ್ತೆಯಾಗಿವೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಇದಕ್ಕೆ ಹೊಣೆ ಹೊರುತ್ತದೆಯೇ? ಇಷ್ಟು ದೊಡ್ಡ ಭದ್ರತಾ ಲೋಪಕ್ಕೆ ಈಗ ಯಾರು ರಾಜೀನಾಮೆ ಕೊಡುತ್ತಾರೆ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಬಿ.ವೈ ವಿಜಯೇಂದ್ರಗೆ ನೇರ ಸವಾಲು

ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣದ ವೇಳೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದನ್ನು ಲಾಡ್ ಇದೇ ವೇಳೆ ನೆನಪಿಸಿದರು. “ನಾಗೇಂದ್ರ ಅವರ ವಿಚಾರದಲ್ಲಿ ಬಿಜೆಪಿಗರು ಅಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ರಲ್ಲಾ? ಈಗ ಬ್ಯಾಂಕ್‌ನಲ್ಲೇ ಇಷ್ಟೊಂದು ನಕಲಿ ನೋಟು ಪತ್ತೆಯಾಗಿರುವುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏನು ಹೇಳುತ್ತಾರೆ?” ಎಂದು ನೇರವಾಗಿ ಸವಾಲು ಹಾಕಿದ್ದಾರೆ.

ಆರ್ಥಿಕತೆಯ ಬಗ್ಗೆಯೂ ವ್ಯಂಗ್ಯ

ಇದೇ ವೇಳೆ, ಭಾರತದ ಜಿಡಿಪಿ (GDP) ಶೇ. 7.8 ತಲುಪಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೂ ತಿರುಗೇಟು ನೀಡಿದ ಅವರು, “ನಿಜವಾಗಿಯೂ ದೇಶದ ಜಿಡಿಪಿ 7.8ಕ್ಕೆ ತಲುಪಿದ್ದರೆ, ಆ ಏರಿಕೆ ಶೇರು ಮಾರುಕಟ್ಟೆಯಲ್ಲಿ (Stock Market) ಕಾಣಬೇಕಿತ್ತಲ್ಲವೇ?” ಎಂದು ಕೇಂದ್ರದ ಆರ್ಥಿಕ ನೀತಿಗಳ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.

ಏನಿದು ಪಿಎನ್‌ಬಿ ನಕಲಿ ನೋಟು ಪ್ರಕರಣ?

ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್‌ನಲ್ಲಿ ಸುಮಾರು 17 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿ ದೇಶಾದ್ಯಂತ ಸಂಚಲನ ಮೂಡಿಸಿವೆ. ರಿಸರ್ವ್ ಬ್ಯಾಂಕ್‌ಗೆ (RBI) ಹಣ ರವಾನಿಸುವಾಗ ಈ ಭಾರೀ ವಂಚನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್‌ನ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *