ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High BP) ಎಷ್ಟು ಸಾಮಾನ್ಯವೋ, ಕಡಿಮೆ ರಕ್ತದೊತ್ತಡ (Low BP ಅಥವಾ Hypotension) ಕೂಡ ಅಷ್ಟೇ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ರಕ್ತದೊತ್ತಡವು 90/60 mmHg ಗಿಂತ ಕಡಿಮೆಯಿದ್ದರೆ ಅದನ್ನು ಲೋ ಬಿಪಿ ಎಂದು ಪರಿಗಣಿಸಲಾಗುತ್ತದೆ. ತಲೆಸುತ್ತು, ಅತಿಯಾದ ಆಯಾಸ, ಕಣ್ಣು ಕತ್ತಲು ಬರುವುದು, ಉಸಿರಾಟದ ತೊಂದರೆ ಮತ್ತು ಏಕಾಗ್ರತೆಯ ಕೊರತೆ ಇದರ ಪ್ರಮುಖ ಲಕ್ಷಣಗಳಾಗಿವೆ.

ಲೋ ಬಿಪಿಯನ್ನು ನಿರ್ಲಕ್ಷಿಸಿದರೆ ಮೆದುಳು, ಹೃದಯ ಮತ್ತು ಇತರ ಪ್ರಮುಖ ಅಂಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗದೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ಲೋ ಬಿಪಿ ಬರಲು ಪ್ರಮುಖ ಕಾರಣಗಳೇನು? ಕಡಿಮೆ ರಕ್ತದೊತ್ತಡ ಕಾಡಲು ನಮ್ಮ ದೈನಂದಿನ ಜೀವನಶೈಲಿ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಕಾರಣವಾಗುತ್ತವೆ:
- ನಿರ್ಜಲೀಕರಣ (Dehydration): ದೇಹದಲ್ಲಿ ಸಾಕಷ್ಟು ನೀರಿನ ಅಂಶವಿಲ್ಲದಿದ್ದಾಗ ರಕ್ತದ ಪ್ರಮಾಣ ಕಡಿಮೆಯಾಗಿ ಬಿಪಿ ಕುಸಿಯುತ್ತದೆ. ವಾಂತಿ, ಭೇದಿ ಅಥವಾ ಅತಿಯಾದ ಬೆವರುವಿಕೆಯಿಂದಲೂ ಇದು ಸಂಭವಿಸಬಹುದು.
- ಪೌಷ್ಟಿಕಾಂಶದ ಕೊರತೆ: ದೇಹದಲ್ಲಿ ವಿಟಮಿನ್ ಬಿ-12, ಫೋಲೇಟ್ ಮತ್ತು ಕಬ್ಬಿಣಾಂಶದ ಕೊರತೆಯಿದ್ದರೆ ಕೆಂಪು ರಕ್ತ ಕಣಗಳ ಉತ್ಪಾದನೆ ಕಡಿಮೆಯಾಗಿ, ರಕ್ತಹೀನತೆ (Anemia) ಮತ್ತು ಲೋ ಬಿಪಿಗೆ ಕಾರಣವಾಗುತ್ತದೆ.
- ಹೃದಯದ ಸಮಸ್ಯೆಗಳು: ಹೃದಯ ಬಡಿತದಲ್ಲಿ ಏರುಪೇರು, ಹೃದಯದ ಕವಾಟಗಳ ಸಮಸ್ಯೆ ಇದ್ದಾಗ ದೇಹದಾದ್ಯಂತ ರಕ್ತ ಪರಿಚಲನೆ ಸರಾಗವಾಗಿ ಆಗದೆ ಬಿಪಿ ಕಡಿಮೆಯಾಗುತ್ತದೆ.
- ಹಾರ್ಮೋನ್ ಏರುಪೇರು: ಥೈರಾಯ್ಡ್ ಸಮಸ್ಯೆಗಳು, ಮಧುಮೇಹ ಮತ್ತು ಗರ್ಭಧಾರಣೆಯ ಸಮಯದಲ್ಲಿ ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳಿಂದ ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
- ರಕ್ತಸ್ರಾವ: ಅಪಘಾತ ಅಥವಾ ಆಂತರಿಕ ಗಾಯಗಳಿಂದ ವಿಪರೀತ ರಕ್ತಸ್ರಾವವಾದಾಗ ರಕ್ತದೊತ್ತಡ ದಿಢೀರನೆ ಕುಸಿಯುತ್ತದೆ.

ಲೋ ಬಿಪಿ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು: ಕಡಿಮೆ ರಕ್ತದೊತ್ತಡವನ್ನು ದೈನಂದಿನ ಅಭ್ಯಾಸಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸುಲಭವಾಗಿ ನಿಯಂತ್ರಿಸಬಹುದು:
- ಸಾಕಷ್ಟು ನೀರು ಕುಡಿಯಿರಿ: ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ಜ್ಯೂಸ್ ಸೇವನೆ ಬಹಳ ಉತ್ತಮ.
- ಉಪ್ಪಿನ ಪ್ರಮಾಣ: ಲೋ ಬಿಪಿ ಇರುವವರು ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬಹುದು. ಆದರೆ, ಇದನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಮಾಡುವುದು ಸೂಕ್ತ.
- ಆಗಾಗ ಆಹಾರ ಸೇವಿಸಿ: ದಿನಕ್ಕೆ ಮೂರು ಬಾರಿ ಭಾರಿ ಊಟ ಮಾಡುವ ಬದಲು, ಸಣ್ಣ ಪ್ರಮಾಣದಲ್ಲಿ ದಿನದಲ್ಲಿ ಐದಾರು ಬಾರಿ ಪೌಷ್ಟಿಕ ಆಹಾರವನ್ನು ಸೇವಿಸಿ. ಇದು ರಕ್ತದೊತ್ತಡ ದಿಢೀರ್ ಕುಸಿಯುವುದನ್ನು ತಡೆಯುತ್ತದೆ.
- ಧಿಡೀರ್ ಏಳಬೇಡಿ: ಮಲಗಿರುವಾಗ ಅಥವಾ ಕುಳಿತಿರುವಾಗ ಒಮ್ಮೆಲೇ ಎದ್ದು ನಿಲ್ಲಬೇಡಿ. ಇದು ತಲೆಸುತ್ತು ಬರಲು ಕಾರಣವಾಗಬಹುದು. ನಿಧಾನವಾಗಿ ಎದ್ದು ನಿಲ್ಲುವ ಅಭ್ಯಾಸ ಮಾಡಿಕೊಳ್ಳಿ.
- ಕೆಫಿನ್ ಸೇವನೆ: ದಿಢೀರನೆ ಬಿಪಿ ಕಡಿಮೆಯಾದಾಗ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದು ತಾತ್ಕಾಲಿಕವಾಗಿ ರಕ್ತದೊತ್ತಡವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಸಮತೋಲಿತ ಆಹಾರ: ಹಸಿರು ತರಕಾರಿಗಳು, ಸೊಪ್ಪು, ಹಣ್ಣುಗಳು, ಒಣಹಣ್ಣುಗಳು (Dry fruits) ಮತ್ತು ಮೊಟ್ಟೆಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.
(ಸೂಚನೆ: ಈ ಮೇಲಿನ ಮಾಹಿತಿಯು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ರಕ್ತದೊತ್ತಡದ ಸಮಸ್ಯೆ ತೀವ್ರವಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.)
