ನ್ಯೂಯಾರ್ಕ್: ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ, ಭಾರತದ ವಿರುದ್ಧ ಪ್ರಚಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ದೊಡ್ಡ ಬೆಲೆ ತೆರಬೇಕಾಗುತ್ತದೆ ಮತ್ತು ಈ ಕೃತ್ಯದ ಪರಿಣಾಮಗಳನ್ನು ಅದು ಎದುರಿಸಲೇಬೇಕಾಗುತ್ತದೆ” ಎಂದು ಭಾರತದ ಖಡಕ್ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಅಧ್ಯಕ್ಷತೆಯಲ್ಲಿ ನಡೆದ ‘ವಿಶ್ವಸಂಸ್ಥೆಯ ಚಾರ್ಟ್‌ನ ತತ್ವಗಳ ರಕ್ಷಣೆ’ ಕುರಿತ ಮುಕ್ತ ಚರ್ಚೆಯಲ್ಲಿ ಪಾಕಿಸ್ತಾನದ ರಾಯಭಾರಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತದ ಖಾಯಂ ರಾಯಭಾರಿ ಪರ್ವತನೇನಿ ಹರೀಶ್ ಅವರು ಪಾಕಿಸ್ತಾನದ ನರಿಬುದ್ಧಿ ಹಾಗೂ ಭಯೋತ್ಪಾದಕ ನೀತಿಯನ್ನು ಜಾಗತಿಕ ವೇದಿಕೆಯಲ್ಲಿ ಸಂಪೂರ್ಣವಾಗಿ ಬೆತ್ತಲುಗೊಳಿಸಿದರು.

ಸಾವಿರ ಗಾಯಗಳ ಮೂಲಕ ಭಾರತವನ್ನು ರಕ್ತಸಿಕ್ತಗೊಳಿಸುವ ತಂತ್ರ!

ವಿಶ್ವಸಂಸ್ಥೆಯ ನಿಯಮಗಳ ಬಗ್ಗೆ ಪಾಕಿಸ್ತಾನ ಮಾತನಾಡುವುದು ಅತ್ಯಂತ ಹಾಸ್ಯಾಸ್ಪದ ಎಂದ ರಾಯಭಾರಿ ಹರೀಶ್, “ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಳಸುವುದು ಮತ್ತು ‘ಸಾವಿರ ಗಾಯಗಳ ಮೂಲಕ ಭಾರತವನ್ನು ರಕ್ತಸಿಕ್ತಗೊಳಿಸುವುದು’ (Bleeding India by a thousand cuts) ಎಂಬ ಪಾಕಿಸ್ತಾನದ ಸಿದ್ಧಾಂತವೇ, ವಿಶ್ವಸಂಸ್ಥೆಯ ನಿಯಮಗಳ ಬಗ್ಗೆ ಅದಕ್ಕಿರುವ ಬದ್ಧತೆ ಎಷ್ಟು ಟೊಳ್ಳು ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಬಂದ ದಿನದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಸರಣಿ ಆಕ್ರಮಣಗಳು ಮತ್ತು ಭಯೋತ್ಪಾದನೆಯನ್ನೇ ತನ್ನ ನೀತಿಯನ್ನಾಗಿಸಿಕೊಂಡಿದೆ ಎಂದು ಅವರು ನೆನಪಿಸಿದರು.

ಆತ್ಮರಕ್ಷಣೆಗೆ ಭಾರತಕ್ಕೆ ಸಂಪೂರ್ಣ ಹಕ್ಕಿದೆ!

“ಗಡಿಯಾಚೆಗಿನ ಇಂತಹ ಹೇಡಿತನದ ಭಯೋತ್ಪಾದಕ ದಾಳಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಭಾರತಕ್ಕೆ ಸಂಪೂರ್ಣ ಹಕ್ಕಿದೆ. ತನ್ನ ನೆಲದಲ್ಲಿ ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಮತ್ತು ಹಿಂಸಾತ್ಮಕ ಆಮೂಲಾಗ್ರೀಕರಣವನ್ನು ಪೋಷಿಸುತ್ತಿರುವ ಇಸ್ಲಾಮಾಬಾದ್, ಇನ್ನು ಮುಂದೆಯಾದರೂ ಇದನ್ನು ನಂಬಲರ್ಹ ಮತ್ತು ಶಾಶ್ವತ ರೀತಿಯಲ್ಲಿ ನಿಲ್ಲಿಸಬೇಕು” ಎಂದು ಭಾರತದ ರಾಯಭಾರಿ ಸ್ಪಷ್ಟಪಡಿಸಿದರು.

ಅಫ್ಘಾನಿಸ್ತಾನದ ಮೇಲಿನ ದಾಳಿಯನ್ನೂ ಪ್ರಸ್ತಾಪಿಸಿದ ಭಾರತ

ಕೇವಲ ಭಾರತ ಮಾತ್ರವಲ್ಲದೆ, ನೆರೆಹೊರೆಯ ದೇಶಗಳ ಮೇಲೂ ಪಾಕಿಸ್ತಾನ ನಡೆಸುತ್ತಿರುವ ಹಿಂಸಾಚಾರವನ್ನು ಭಾರತ ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಿದೆ. ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ನೂರಾರು ಅಮಾಯಕ ನಾಗರಿಕರು ಬಲಿಯಾಗಿರುವುದನ್ನು ವಿಶ್ವಸಂಸ್ಥೆಯ ವರದಿಯ ಆಧಾರದ ಮೇಲೆ ಭಾರತ ಪ್ರಸ್ತಾಪಿಸಿತು. ತನ್ನದೇ ಜನರನ್ನು ಬಾಂಬ್ ಹಾಕಿ ಕೊಲ್ಲುವ ಮತ್ತು ಜನಾಂಗೀಯ ಹತ್ಯೆಗಳ ಇತಿಹಾಸ ಹೊಂದಿರುವ ಪಾಕಿಸ್ತಾನಕ್ಕೆ ಭಾರತದ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದೆ.

ಭಾರತದ ಈ ಆಕ್ರಮಣಕಾರಿ ಮತ್ತು ತರ್ಕಬದ್ಧ ಪ್ರತಿಕ್ರಿಯೆಯಿಂದಾಗಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರಿ ಮುಖಭಂಗವಾಗಿದೆ.

Leave a Reply

Your email address will not be published. Required fields are marked *