ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಎಣಿಕೆ ಪ್ರಕ್ರಿಯೆಯಲ್ಲಿ (ಮೇ 4, 2026) ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಯಾರೂ ಊಹಿಸದ ರೀತಿಯಲ್ಲಿ ಮುನ್ನಡೆ ಸಾಧಿಸಿ, ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಿಸಿದೆ. ಆಡಳಿತರೂಢ ಡಿಎಂಕೆ (DMK) ಮತ್ತು ಪ್ರಬಲ ವಿರೋಧ ಪಕ್ಷ ಎಐಎಡಿಎಂಕೆ (AIADMK) ಎರಡನ್ನೂ ಹಿಂದಿಕ್ಕಿ ಟಿವಿ ಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

ದ್ರಾವಿಡ ಕೋಟೆ ನಡುಗಿಸಿದ ವಿಜಯ್:

ಸುಮಾರು 50 ವರ್ಷಗಳಿಂದ ತಮಿಳುನಾಡನ್ನು ಆಳುತ್ತಿದ್ದ ದ್ರಾವಿಡ ಸಿದ್ಧಾಂತದ ಎರಡು ಪ್ರಬಲ ಧ್ರುವಗಳಿಗೆ ವಿಜಯ್ ಅಬ್ಬರವು ಬ್ರೇಕ್ ಹಾಕಿದೆ. ಟ್ರೆಂಡ್‌ಗಳ ಪ್ರಕಾರ, ವಿಜಯ್ ಅವರ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರಳ ಬಹುಮತದ ಗಡಿಯ ಹತ್ತಿರದಲ್ಲಿದೆ. ವಿಶೇಷವೆಂದರೆ, ವಿಜಯ್ ಅವರು ಸ್ಪರ್ಧಿಸಿದ್ದ ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಡಿಎಂಕೆ ಧೂಳಿಪಟ – ಸ್ಟಾಲಿನ್‌ಗೆ ಹಿನ್ನಡೆ:

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ವಕ್ಷೇತ್ರ ಕೊಳತ್ತೂರಿನಲ್ಲಿ ಟಿವಿ ಕೆ ಅಭ್ಯರ್ಥಿ ವಿ.ಎಸ್. ಬಾಬು ಅವರಿಗಿಂತ ಹಿನ್ನಡೆ ಅನುಭವಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಚೆನ್ನೈ ಮತ್ತು ಸುತ್ತಮುತ್ತಲ ಜಿಲ್ಲೆಗಳಾದ ಕಾಂಚೀಪುರಂ ಹಾಗೂ ಚೆಂಗಲ್ಪಟ್ಟುಗಳಲ್ಲಿ ಡಿಎಂಕೆ ಹಿಡಿತ ಸಾಧಿಸುತ್ತಿದ್ದ ಜಾಗದಲ್ಲಿ ಈಗ ವಿಜಯ್ ಅವರ ಪಕ್ಷದ ಬಾವುಟ ಹಾರುತ್ತಿದೆ. ಸಚಿವರಾದ ಪಿ.ಕೆ. ಶೇಖರ್ ಬಾಬು ಮತ್ತು ಮಾ. ಸುಬ್ರಮಣಿಯನ್ ಅವರಂತಹ ಘಟಾನುಘಟಿ ನಾಯಕರೂ ಸಹ ಹಿನ್ನಡೆ ಅನುಭವಿಸುತ್ತಿದ್ದಾರೆ.

ಬದಲಾದ ಮತದಾರರ ಒಲವು:

ಡಿಎಂಕೆ ಆಡಳಿತದ ಮೇಲಿನ ಆಡಳಿತ ವಿರೋಧಿ ಅಲೆ ಮತ್ತು ಎಐಎಡಿಎಂಕೆಯ ಆಂತರಿಕ ಗೊಂದಲಗಳ ಲಾಭವನ್ನು ವಿಜಯ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದಾರೆ. ಯುವ ಮತದಾರರು ಮತ್ತು ಹೊಸ ಬದಲಾವಣೆ ಬಯಸುವ ಜನರ ಪೂರ್ಣ ಬೆಂಬಲ ವಿಜಯ್ ಅವರಿಗೆ ಸಿಕ್ಕಿರುವುದು ಇಂದಿನ ಫಲಿತಾಂಶದಿಂದ ಸ್ಪಷ್ಟವಾಗುತ್ತಿದೆ.

ರಾಜಕೀಯ ಭೂಕಂಪ:

ತಮಿಳುನಾಡಿನ ಇತಿಹಾಸದಲ್ಲಿ ಚಿತ್ರರಂಗದ ತಾರೆಗಳು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಆದರೆ, ಕೇವಲ ಎರಡೇ ವರ್ಷದ ಹಿಂದೆ ಹುಟ್ಟಿದ ಪಕ್ಷವೊಂದು ಆಡಳಿತರೂಢ ಮೈತ್ರಿಯನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಚ್ಚಿಬೀಳಿಸಿದ್ದು ಮಾತ್ರ ದಾಖಲೆಯೇ ಸರಿ.

Leave a Reply

Your email address will not be published. Required fields are marked *