ಪೊಲಿಟಿಕಲ್ ಡೆಸ್ಕ್ (22-02-2023): ಭಾರತದ ಈ ರಾಜ್ಯದಲ್ಲಿ ಇದುವರೆಗೂ ಒಬ್ಬ ಮಹಿಳಾ ಶಾಸಕಿ ಗೆದ್ದುಬಂದಿಲ್ಲ! ಇಲ್ಲಿಯವರೆಗೂ ನಡೆದಿರುವ ಚುನಾವಣೆಗಳಲ್ಲಿ ಯಾವೊಬ್ಬ ಮಹಿಳಾ ಅಭ್ಯರ್ಥಿಗಳು ಜಯಗಳಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದೇ ಇಲ್ಲ!
ಆ ರಾಜ್ಯ ಯಾವುದು ಗೊತ್ತೆ? ಮುಂದೆ ಓದಿ.
1963ರಲ್ಲಿ ರಾಜ್ಯ ಸ್ಥಾನಮಾನ ದೊರೆತ ಈ ರಾಜ್ಯ ಭಾರತದ ಈಶಾನ್ಯ ದಿಕ್ಕಿನಲ್ಲಿದೆ. ಮ್ಯಾನ್ಮಾರ್ ನ ಗಡಿಯಲ್ಲಿರುವ ಇದು ಸುಂದರವಾದ ಪರ್ವತಗಳನ್ನು ಹೊಂದಿದ್ದು ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ವಿವಿಧ ಬುಡಕಟ್ಟುಗಳ ಸಂಸ್ಕೃತಿ, ಉಡುಗೆ ತೊಡುಗೆ ಮುಂತಾದವುಗಳಲ್ಲಿ ಬಹಳ ಭಿನ್ನವಾಗಿದ್ದು ವಿಶೇಷ ಸ್ಥಾನ ಪಡೆದುಕೊಂಡಿದೆ. ಆ ರಾಜ್ಯವೇ ನಾಗಾಲ್ಯಾಂಡ್. ಹೌದು ನಾಗಾಲ್ಯಾಂಡ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ 60 ಸದಸ್ಯ ಬಲ ಹೊಂದಿರುವ ಸದನಕ್ಕೆ ಇದುವರೆಗೂ ಯಾವೊಬ್ಬ ಮಹಿಳೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿಲ್ಲ. ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಇರಬಾರದು ಎಂಬ ಮನಸ್ಥಿತಿ ಈಶಾನ್ಯ ರಾಜ್ಯದಲ್ಲಿ ಇದೆ, ಹಾಗಾಗಿ ಚುನಾವಣೆಯಲ್ಲಿ ಮಹಿಳೆಯರನ್ನು ಆಯ್ಕೆ ಮಾಡಲು ಮತದಾರರು ಹಿಂದೇಟು ಹಾಕುತ್ತಾ ಬಂದಿದ್ದು ಮಹಿಳಾ ಪ್ರಾತಿನಿಧ್ಯವೇ ಇಲ್ಲದಂತಾಗಿದೆ.

ಕಳೆದ ವರ್ಷ, ಎಸ್ ಫಾಂಗ್ನಾನ್ ಕೊನ್ಯಾಕ್, ರಾಜ್ಯಸಭಾ ಸದಸ್ಯೆ ಅವರು ಈಶಾನ್ಯ ರಾಜ್ಯದಿಂದ ಆಯ್ಕೆಗೊಂಡ ಮೊದಲ ಮಹಿಳಾ ಸಂಸತ್ ಸದಸ್ಯರಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೊದಲು 1977ರಲ್ಲಿ ರಾಜ್ಯದಿಂದ ಲೋಕಸಭೆಗೆ ರಾನೊ ಎಂ ಶೈಜಾ ಆಯ್ಕೆಯಾಗಿದ್ದರು. ಕೊನ್ಯಾಕ್ ಅವರು ಇದೀಗ ಎರಡನೇ ಸಂಸದರಾಗಿದ್ದಾರೆ.

ಸದ್ಯ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಯಾರಾದರೂ ಗೆದ್ದು ಇತಿಹಾಸ ನಿರ್ಮಿಸುತ್ತಾರೆಯೇ ಎಂದು ಕಾದುನೋಡಬೇಕಿದೆ. ಎನ್‌ಡಿಪಿಪಿ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳು ಈ ಬಾರಿ ಮಹಿಳೆಯರನ್ನು ಸಹ ಕಣಕ್ಕಿಳಿಸಿವೆ. ಚುನಾವಣಾ ಫಲಿತಾಂಶದ ಬಳಿಕವಷ್ಟೇ ನಾಗಾಲ್ಯಾಂಡ್ ಸದನದಲ್ಲಿ ಈ ಬಾರಿ ಮಹಿಳಾ ಶಾಸಕಿ ಇರುತ್ತಾರೋ ಇಲ್ಲವೋ ಎಂಬುದು ತಿಳಿಯಲಿದೆ.
-ಬಿಗ್ ಕನ್ನಡ ಪೊಲಿಟಿಕಲ್ ಡೆಸ್ಕ್