ಇವರ ಹೆಸರು ನೇಹಾ ಸಿಂಗ್ ರಾಥೋರ್. ಇವರು ಉತ್ತರಪ್ರದೇಶದ ಭೋಜಪುರಿ ಗಾಯಕಿ. ಇವರ ಹೊಸ ಹಾಡು “ಯುಪಿಮೆ ಕಾ ಬಾ” ಈಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ವಾರ ಉತ್ತರಪ್ರದೇಶದ ಕಾನ್ಪುರ ದಲ್ಲಿ ಅಕ್ರಮ ಮನೆಗಳು ಎಂದು ಗುರುತಿಸಲಾದ ಬಡವರ ಗುಡಿಸಲುಗಳ ಧ್ವಂಸ ಕಾರ್ಯ ನಡೆಸಲು ಆದಿತ್ಯನಾಥ್ ಸರ್ಕಾರದ ಜಿಲ್ಲಾಡಳಿತ ಬುಲ್ಡೋಜರ್ ಗಳನ್ನ ತಂದಿತ್ತು. ಆದರೆ 45 ವರ್ಷದ ತಾಯಿ ಪ್ರಮೀಳಾ ದೀಕ್ಷಿತ್ ಮತ್ತು ಆಕೆಯ 20 ವರ್ಷದ ಮಗಳು ನೇಹ ಮನೆಯಿಂದ ಹೊರಬರಲು ನಿರಾಕರಿಸಿದರು. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ಜೀವಂತ ಸುಟ್ಟು ಬೂದಿಯಾದರು.
ಆರೋಪಗಳ ಪ್ರಕಾರ ಅಧಿಕಾರಿಗಳೇ ಈ ಕೃತ್ಯ ಮಾಡಿದ್ದಾರೆ. ಇಂತಹ ಘೋರ ಘಟನೆಯ ಬಗ್ಗೆ ನೇಹಾ ಸಿಂಗ್ ಅವರು ಹಾಡು ಹಾಡಿದ್ದಾರೆ. ಅದು ಆದಿತ್ಯನಾಥ್ ಸರ್ಕಾರದ ಕಣ್ಣು ಕೆಂಪಾಗಿಸಿದೆ. ಈ ಹಾಡಿನಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದೂ, ಗಲಭೆ ಶೃಷ್ಟಿಯಾಗುವ ಆತಂಕ ಇದೆ ಎಂದೂ ಪೊಲೀಸರು ಆಕೆಗೆ ನೋಟಿಸ್ ನೀಡಿದ್ದಾರೆ. ಆ ಮೂಲಕ ಆಕೆಯನ್ನು ಬೆದರಿಸಲು ಮುಂದಾಗಿದ್ದಾರೆ. ದೌರ್ಜನ್ಯದ ವಿರುದ್ಧ ಮಾತನಾಡಿದರೆ ಅದರಿಂದ ಶಾಂತಿ ಕದಡುತ್ತೆ ಅನ್ನುವ ಕಂತ್ರಿ ವ್ಯವಸ್ಥೆಯಲ್ಲಿ ನಮ್ಮ ದೇಶ ಇರುವುದು ದುರಂತ.
- ಭಾಗ್ಯನಾರಾಯಣ ಬೊಗ್ಗವರಪು