ಚೆನ್ನೈ: ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿನ ಗೆಲುವಿನ ನಂತರ ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ಸಿಎಂ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ವಿವಾದಿತ ಪರಂದೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟ ಬೆನ್ನಲ್ಲೇ, ಚೆನ್ನೈಗೆ 2ನೇ ವಿಮಾನ ನಿಲ್ದಾಣ ನಿರ್ಮಿಸಲು ಮಣೆಲ್ಲೂರು ಹಾಗೂ ಚೆಯ್ಯೂರು ಎಂಬ 2 ಸ್ಥಳಗಳನ್ನು ವಿಜಯ್ ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದೆ.

ಈ ಹಿಂದೆ ತಮಿಳುನಾಡು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ‘ಈ ಧ್ವನಿ’ ಹಾಗೂ ‘ಬಿಗ್ ಕನ್ನಡ’ ವೇದಿಕೆಗಳಲ್ಲಿ ನಾವು ವ್ಯಾಪಕವಾಗಿ ವರದಿ ಮಾಡಿದಂತೆ, ಪರಂದೂರು ವಿಮಾನ ನಿಲ್ದಾಣದ ವಿರುದ್ಧ ಏಗನಾಪುರಂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. “ಅಭಿವೃದ್ಧಿ ಬೇಕು, ಆದರೆ ರೈತರ ಕಣ್ಣೀರಿನ ಮೇಲಲ್ಲ, ಅವರ ಹೊಟ್ಟೆ ಮೇಲೆ ಹೊಡೆಯಲ್ಲ” ಎಂಬ ನಿಲುವಿಗೆ ಬದ್ಧರಾಗಿ ಸಿಎಂ ವಿಜಯ್ ಪರಂದೂರು ಯೋಜನೆಯನ್ನು ವಿಧಾನಸಭೆಯಲ್ಲಿ ಇತ್ತೀಚೆಗಷ್ಟೇ ರದ್ದುಗೊಳಿಸಿದ್ದರು. ಇದೀಗ ಕೇವಲ ಒಂದು ವಾರದ ಅಂತರದಲ್ಲಿ ಪರ್ಯಾಯವಾಗಿ 2 ಹೊಸ ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಎಲ್ಲಿದೆ ಈ ಸ್ಥಳಗಳು?

ಹೊಸದಾಗಿ ಗುರುತಿಸಲಾಗಿರುವ:

  • ಮಣೆಲ್ಲೂರು: ಚೆನ್ನೈ ನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ.
  • ಚೆಯ್ಯೂರು: ಚೆನ್ನೈ ನಗರದಿಂದ ಸುಮಾರು 100 ಕಿಲೋಮೀಟರ್ ಅಂತರದಲ್ಲಿದೆ.

ಈ ಎರಡೂ ಸ್ಥಳಗಳಲ್ಲಿ ಸೂಕ್ತವಾದದ್ದನ್ನು ಅಂತಿಮಗೊಳಿಸಿ, ಚೆನ್ನೈ ಮಹಾನಗರ ಪ್ರದೇಶಕ್ಕೆ (CMA) ಅತ್ಯುತ್ತಮ ವಿಮಾನಯಾನ ಸೇವೆ ಒದಗಿಸುವ ಗುರಿಯನ್ನು ತಮಿಳುನಾಡು ಸರ್ಕಾರ ಹೊಂದಿದೆ.

ವಿಪಕ್ಷಗಳ ಟೀಕೆ ಹಾಗೂ ಸರ್ಕಾರದ ತಿರುಗೇಟು:

ರೈತರ ಹಿತದೃಷ್ಟಿಯಿಂದ ಪರಂದೂರು ಯೋಜನೆ ರದ್ದುಗೊಳಿಸಿದ ಸಿಎಂ ವಿಜಯ್ ಅವರ ನಿರ್ಧಾರವನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಈ ನಿರ್ಧಾರವು ರಾಜ್ಯದ ಅಭಿವೃದ್ಧಿಯನ್ನು 10 ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತದೆ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಆರೋಪಿಸಿದ್ದರು. ಆದರೆ, ಪರಂದೂರು ಯೋಜನೆ ಕೈಬಿಟ್ಟ ಕೇವಲ ಒಂದೇ ವಾರದಲ್ಲಿ ಪರ್ಯಾಯ ಸ್ಥಳಗಳನ್ನು ಗುರುತಿಸುವ ಮೂಲಕ ವಿಜಯ್ ಸರ್ಕಾರ ವಿಪಕ್ಷಗಳ ಟೀಕೆಗೆ ದಿಟ್ಟ ಉತ್ತರ ನೀಡಿದೆ.

ಸದ್ಯದಲ್ಲೇ ಈ ಹೊಸ ಸ್ಥಳಗಳ ಭೌಗೋಳಿಕ ಮತ್ತು ತಾಂತ್ರಿಕ ಸಾಧ್ಯಾಸಾಧ್ಯತೆಗಳ ಅಧ್ಯಯನ ನಡೆದ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ತಮಿಳುನಾಡು ಸರ್ಕಾರದ ಈ ತ್ವರಿತ ನಡೆ ಆರ್ಥಿಕ ಹಾಗೂ ಮೂಲಸೌಕರ್ಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

Leave a Reply

Your email address will not be published. Required fields are marked *