ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಸುಮಾರು 115 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಶನಿವಾರ ಮುಂಜಾನೆ ಜಿಲ್ಲಾಡಳಿತ ನೆಲಸಮಗೊಳಿಸಿದೆ. ಈ ಕಾರ್ಯಾಚರಣೆಯನ್ನು ಖಂಡಿಸಿರುವ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಏನಿದು ಪ್ರಕರಣ? ಸಹರಾನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಈ ಮಸೀದಿಯನ್ನು ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬಜರಂಗದಳದ ಮುಖಂಡರೊಬ್ಬರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಟಿ ಮ್ಯಾಜಿಸ್ಟ್ರೇಟ್, ಕಟ್ಟಡವನ್ನು ಅಕ್ರಮ ಎಂದು ಘೋಷಿಸಿ ತೆರವುಗೊಳಿಸಲು ಜುಲೈನಲ್ಲಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿತ್ತಾದರೂ, ಶುಕ್ರವಾರ (ಸೆಪ್ಟೆಂಬರ್ 4) ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ, ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬುಲ್ಡೋಜರ್‌ಗಳ ಮೂಲಕ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ.

ಓವೈಸಿ ಆಕ್ರೋಶ: ಮಸೀದಿ ಧ್ವಂಸ ಕಾರ್ಯಾಚರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಸಾದುದ್ದೀನ್ ಓವೈಸಿ, “1911ರ ಕಾಲದ ದಾಖಲೆಗಳು ಈ ಮಸೀದಿಯ ಅಸ್ತಿತ್ವವನ್ನು ಸಾಬೀತುಪಡಿಸುತ್ತವೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಇಲ್ಲಿ ನಮಾಜ್ ಮಾಡಲಾಗುತ್ತಿದೆ. ಆದರೂ, ಮೇಲ್ಮನವಿ ಸಲ್ಲಿಸಲು ಅವಕಾಶವನ್ನೂ ನೀಡದೆ, ಕಳ್ಳರಂತೆ ಮುಂಜಾನೆ 5 ಗಂಟೆಗೆ ಮಸೀದಿಯನ್ನು ಕೆಡವಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮುಸ್ಲಿಮರಿಗೆ ಅನ್ವಯಿಸುವುದಿಲ್ಲವೇ?” ಎಂದು ನೇರವಾಗಿ ಪ್ರಧಾನಿ ಹಾಗೂ ಸಿಎಂ ಯೋಗಿ ಅವರನ್ನು ಪ್ರಶ್ನಿಸಿದ್ದಾರೆ.

“ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲಾ ಮಸೀದಿಗಳನ್ನು ಗುರಿಯಾಗಿಸಲಾಗುತ್ತಿದೆ. ಕೇವಲ ನೆಪಗಳನ್ನು ಮುಂದಿಟ್ಟುಕೊಂಡು ನಮ್ಮ ಪ್ರಾರ್ಥನಾ ಮಂದಿರಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತಿರುವುದು ಸಂವಿಧಾನವನ್ನು ದುರ್ಬಲಗೊಳಿಸುವ ಷಡ್ಯಂತ್ರ” ಎಂದು ಓವೈಸಿ ಆರೋಪಿಸಿದ್ದಾರೆ.

ವಿಪಕ್ಷಗಳ ಖಂಡನೆ: ಕೇವಲ ಓವೈಸಿ ಮಾತ್ರವಲ್ಲದೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕೂಡ ಈ ಕಾರ್ಯಾಚರಣೆಯನ್ನು ಖಂಡಿಸಿದ್ದಾರೆ. ಇದೊಂದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ನಡುವೆ, ಮುನ್ನೆಚ್ಚರಿಕಾ ಕ್ರಮವಾಗಿ ಸಹರಾನ್‌ಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಸೀದಿ ಆಡಳಿತ ಮಂಡಳಿಯು ಈ ಕಾರ್ಯಾಚರಣೆ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದೆ.

Leave a Reply

Your email address will not be published. Required fields are marked *