ಪ್ಯಾನ್ ಇಂಡಿಯಾ ಸ್ಟಾರ್, ರೆಬೆಲ್ ಸ್ಟಾರ್ ಪ್ರಭಾಸ್ ಅವರ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಅದೊಂದು ದೊಡ್ಡ ಹಬ್ಬವೇ ಸರಿ. ‘ಕಲ್ಕಿ 2898 AD’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ, ಪ್ರಭಾಸ್ ಮುಂದಿನ ಪ್ರಾಜೆಕ್ಟ್‌ಗಳತ್ತ ಎಲ್ಲರ ಕಣ್ಣು ನೆಟ್ಟಿದೆ. ಇದೀಗ ಡಾರ್ಲಿಂಗ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಹೊರಬಿದ್ದಿದ್ದು, ನಿರ್ದೇಶಕ ಹನು ರಾಘವಪುಡಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಬಿಡುಗಡೆ ದಿನಾಂಕ (Release Date) ಫಿಕ್ಸ್ ಆಗಿದೆ ಎಂಬ ಬಲವಾದ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ‘ಸೀತಾ ರಾಮಂ’ ಖ್ಯಾತಿಯ ನಿರ್ದೇಶಕ ಹನು ರಾಘವಪುಡಿ ಮತ್ತು ಪ್ರಭಾಸ್ ಕಾಂಬಿನೇಷನ್ ಘೋಷಣೆಯಾದಾಗಿನಿಂದಲೇ ಚಿತ್ರದ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ. ಇದೊಂದು ಸ್ವಾತಂತ್ರ್ಯ ಪೂರ್ವದ ಕಥಾಹಂದರವನ್ನು ಹೊಂದಿರುವ ಪಿರಿಯಾಡಿಕ್ ಆಕ್ಷನ್ ಡ್ರಾಮಾ ಆಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳ ಜೊತೆಗೆ ಸುಂದರ ಪ್ರೇಮಕಥೆಯನ್ನೂ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಚಿತ್ರತಂಡವು ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ವೇಗವನ್ನು ಹೆಚ್ಚಿಸಿದ್ದು, ಈ ಬೃಹತ್ ಚಿತ್ರವನ್ನು ಡಿಸೆಂಬರ್ 3 ರಂದು ಅದ್ಧೂರಿಯಾಗಿ ತೆರೆಗೆ ತರಲು ಸೂಕ್ತ ದಿನಾಂಕವನ್ನು ಲಾಕ್ ಮಾಡಿದೆ.

    ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿದೆ. ವಿಶ್ವಾದ್ಯಂತ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರ ಲುಕ್ ಮತ್ತು ಪಾತ್ರ ಇದುವರೆಗಿನ ಅವರ ಎಲ್ಲಾ ಸಿನಿಮಾಗಳಿಗಿಂತಲೂ ತೀರಾ ವಿಭಿನ್ನವಾಗಿರಲಿದ್ದು, ಇದು ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸುವುದು ಖಚಿತ ಎನ್ನುತ್ತಾರೆ ಸಿನಿ ಪಂಡಿತರು.

    ಸದ್ಯ ‘ಫೌಜಿ’ ಚಿತ್ರದ ರಿಲೀಸ್ ಡೇಟ್ ಲಾಕ್ ಆಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಅಧಿಕೃತ ಬಿಡುಗಡೆ ದಿನಾಂಕದ ಪೋಸ್ಟರ್ ಶೀಘ್ರದಲ್ಲೇ ಚಿತ್ರತಂಡದಿಂದ ಹೊರಬೀಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಪ್ರಭಾಸ್ ಅವರ ಈ ಹೊಸ ಅವತಾರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

    Leave a Reply

    Your email address will not be published. Required fields are marked *