ನವದೆಹಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭಾಷಣದ ವೇಳೆ ಮಾಡಿದ ಎಡವಟ್ಟೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರತೀಯ ಜನತಾ ಪಾರ್ಟಿ (BJP) ನಾಯಕರಿಗೆ ಟೀಕಾಸ್ತ್ರವಾಗಿ ಪರಿಣಮಿಸಿದೆ.

ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷೆಗಳ ಅಕ್ರಮದ (ನೀಟ್ ವಿವಾದದ ಹಿನ್ನೆಲೆಯಲ್ಲಿ) ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಪ್ರಿಯಾಂಕಾ ಗಾಂಧಿ ಅವರು ತಪ್ಪು ಅಂಕಿ-ಅಂಶಗಳನ್ನು ನೀಡಿದ್ದಾರೆ. “ದೇಶದ 750 ಕೋಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ” ಎಂದು ಅವರು ಹೇಳಿಕೆ ನೀಡಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯೇ 140 ಕೋಟಿ ದಾಟಿಲ್ಲದಿರುವಾಗ, ಹಾಗೂ ಇಡೀ ಪ್ರಪಂಚದ ಜನಸಂಖ್ಯೆ 800 ಕೋಟಿಯ ಆಸುಪಾಸಿನಲ್ಲಿರುವಾಗ, 750 ಕೋಟಿ ವಿದ್ಯಾರ್ಥಿಗಳು ಎಲ್ಲಿಂದ ಬಂದರು ಎಂಬುದು ಈಗ ನೆಟ್ಟಿಗರ ಪ್ರಶ್ನೆಯಾಗಿದೆ.

ಪಪ್ಪು 2.0′ ಎಂದು ಗೇಲಿ ಮಾಡಿದ ಬಿಜೆಪಿ: ಪ್ರಿಯಾಂಕಾ ಗಾಂಧಿ ಅವರ ಈ ವಿಡಿಯೋ ತುಣುಕನ್ನು ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಹಾಗೂ ಕಮಲ ಪಾಳೆಯದ ನಾಯಕರು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಲೇವಡಿ ಮಾಡಲು ಬಳಸುತ್ತಿದ್ದ ‘ಪಪ್ಪು’ ಪದವನ್ನು ಇದೀಗ ಪ್ರಿಯಾಂಕಾ ಅವರಿಗೂ ಅನ್ವಯಿಸಿ, ಅವರನ್ನು “ಪಪ್ಪು 2.0” (Pappu 2.0) ಎಂದು ಕರೆಯುವ ಮೂಲಕ ಟ್ರೋಲ್ ಮಾಡಿದ್ದಾರೆ.

ರಾಜಕೀಯ ವಾಕ್ಸಮರ: ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡುವ ಮುನ್ನ ಕನಿಷ್ಠ ಸಾಮಾನ್ಯ ಜ್ಞಾನವನ್ನಾದರೂ ಹೊಂದಿರಬೇಕು ಎಂದು ಬಿಜೆಪಿ ನಾಯಕರು ಕಾಲೆಳೆದಿದ್ದಾರೆ. ಡಿಜಿಟಲ್ ಯುಗದಲ್ಲಿ ನಾಯಕರ ಸಣ್ಣ ನಾಲಿಗೆ ಹೊರಳುವಿಕೆಯೂ ವಿರೋಧಿಗಳಿಗೆ ದೊಡ್ಡ ಅಸ್ತ್ರವಾಗುತ್ತದೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *