ಬೆಂಗಳೂರು: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಕುರಿತಾದ ಅವಹೇಳನಕಾರಿ ಹೇಳಿಕೆ ಹಾಗೂ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆಗೆ ಗೈರಾಗಿದ್ದ ಕಾರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಪ್ರದೀಪ್ ಈಶ್ವರ್ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ (Non-Bailable Warrant) ಜಾರಿ ಮಾಡಿ ಆದೇಶ ಹೊರಡಿಸಿದೆ .

ಕೋರ್ಟ್ ವಿಚಾರಣೆಗೆ ಗೈರಾಗಿದ್ದ ಶಾಸಕ!

ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ, ಈ ಪ್ರಮುಖ ವಿಚಾರಣೆಗೆ ಶಾಸಕ ಪ್ರದೀಪ್ ಈಶ್ವರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗರಂ ಆದ ನ್ಯಾಯಾಲಯವು ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬಂಧನ ವಾರಂಟ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅವರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ಕ್ಕೆ ನಿಗದಿಪಡಿಸಿದ್ದಾರೆ .

ಏನಿದು ಪ್ರಕರಣ? (ಹಿನ್ನೆಲೆ)

ಕಳೆದ ವರ್ಷ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ನಡುವೆ ಭಾರಿ ವಾಕ್ಸಮರವೇ ನಡೆದಿತ್ತು. ಈ ವೇಳೆ ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ಅವರನ್ನು “ಮುಳ್ಳು ಹಂದಿ” ಹಾಗೂ “ಕಾಮಿಡಿ ಪೀಸ್” ಎಂದು ಟೀಕಿಸಿದ್ದರು .

ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದ ಪ್ರದೀಪ್ ಈಶ್ವರ್, “ನಮ್ಮ ತಂದೆ ನಿಮ್ಮ ಊರಿಗೆ ಬರಲಿಲ್ಲ ಅಂತಾ ಬೇಜಾರಾ? ನಾನ್ ಕಳ್ಸಕ್ ರೆಡಿ ಇಲ್ಲಾ ಗುರು. ನಮ್ಮದು ಸಂಪ್ರದಾಯಸ್ಥ ಕುಟುಂಬ… ಪ್ರತಾಪ್ ಸಿಂಹ ಅವರ ತಂದೆ ತಾಯಿ ದೈವ ಭಕ್ತರು ಇರಬೇಕು, ಅದಕ್ಕೆ ಪ್ರತಾಪ ಅಂತ ಹೆಸರಿಟ್ಟಿದ್ದಾರೆ. ಇಲ್ಲವಾದರೆ, ಕೋತಿ ಅಂತ ಇಡುತ್ತಿದ್ದರು” ಎಂದು ವೈಯಕ್ತಿಕವಾಗಿ ಅವಹೇಳನ ಮಾಡಿದ್ದರು .

ಈ ಪರಸ್ಪರ ಆರೋಪ-ಪ್ರತ್ಯಾರೋಪಗಳ ಹೇಳಿಕೆಗಳಿಂದ ಕೆರಳಿದ್ದ ಇಬ್ಬರೂ ನಾಯಕರು ಪರಸ್ಪರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಪ್ರತಾಪ್ ಸಿಂಹ ಅವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ಪ್ರದೀಪ್ ಈಶ್ವರ್ ಗೈರಾದ ಕಾರಣ ನ್ಯಾಯಾಲಯ ಈ ಆದೇಶ ನೀಡಿದೆ .

Leave a Reply

Your email address will not be published. Required fields are marked *