ದಾವಣಗೆರೆ:ರಾಜ್ಯ ರಾಜಕೀಯದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ “2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ” ಎಂಬ ಹೇಳಿಕೆಯು ಸಾಕಷ್ಟು ಸಂಚಲನ ಮೂಡಿಸಿದೆ.

ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರು. ಅವರ ಈ ಹೇಳಿಕೆ ಕೇವಲ ವೈಯಕ್ತಿಕ ಆಸೆಯಲ್ಲ, ಬದಲಾಗಿ “ಸಿದ್ದರಾಮಯ್ಯನವರ ಬಣ ಎಷ್ಟು ಪ್ರಬಲವಾಗಿದೆ ಮತ್ತು ಅವರು ಅಧಿಕಾರ ಹಂಚಿಕೆಯ ಸೂತ್ರಕ್ಕೆ ಸದ್ಯಕ್ಕೆ ಸಿದ್ಧರಿಲ್ಲ ಎಂಬ ನೇರ ಸಂದೇಶವನ್ನು ಪಕ್ಷದ ಹೈಕಮಾಂಡ್ ಹಾಗೂ ವಿರೋಧಿ ಬಣಕ್ಕೆ ರವಾನಿಸಿದ್ದಾರೆಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ 2.5 ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದವಿದೆ ಎಂಬ ಚರ್ಚೆಗಳು ಮೊದಲಿನಿಂದಲೂ ಇವೆ. ಜಮೀರ್ ಅವರ ಹೇಳಿಕೆಯು ಈ ಚರ್ಚೆಗೆ ತಣ್ಣೀರೆರಚುವ ಪ್ರಯತ್ನವಾಗಿದೆ.

ಸಿದ್ದರಾಮಯ್ಯನವರು ಪೂರ್ಣಾವಧಿ (5 ವರ್ಷ) ಸಿಎಂ ಆಗಿರುತ್ತಾರೆ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಆಸೆಯನ್ನು 2028ರ ನಂತರಕ್ಕೆ ಮುಂದೂಡಿದ್ದಾರೆ.”2028ರ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂಬುದು ನನ್ನ ಆಸೆ ಕೂಡ” ಎಂದು ಹೇಳುವ ಮೂಲಕ ಜಮೀರ್ ಅವರು ಪಕ್ಷದೊಳಗೆ ಅಸಮಾಧಾನ ಉಂಟಾಗದಂತೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ.

ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದು, ಅವರನ್ನು ಬದಲಾಯಿಸಿದರೆ ಮುಂಬರುವ ಚುನಾವಣೆಗಳಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿ ಕಾಂಗ್ರೆಸ್‌ನ ಒಂದು ವರ್ಗದಲ್ಲಿದೆ. ಜಮೀರ್ ಅವರ ಹೇಳಿಕೆಯು ಈ ಅಹಿಂದ ಶಕ್ತಿಯನ್ನು ಒಗ್ಗೂಡಿಸುವ ಮತ್ತು ಸರ್ಕಾರ ಸುಭದ್ರವಾಗಿದೆ ಎಂದು ತೋರಿಸುವ ತಂತ್ರವೂ ಹೌದು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು “ಈ ಸರ್ಕಾರ ಶೀಘ್ರವೇ ಪತನವಾಗಲಿದೆ” ಅಥವಾ “ಸಿದ್ದರಾಮಯ್ಯನವರನ್ನು ಕೆಳಗಿಳಿಸುತ್ತಾರೆ” ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಈ ವದಂತಿಗಳಿಗೆ ಬ್ರೇಕ್ ಹಾಕಲು ಜಮೀರ್ ಅವರು 2028ರವರೆಗೆ ಕುರ್ಚಿ ಖಾಲಿ ಇಲ್ಲ” ಎಂದು ಕಡಾಖಂಡಿತವಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *