ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಜಯಭೇರಿ ಬಾರಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವುದು ಸ್ಯಾಂಡಲ್‌ವುಡ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

 ಕಳೆದ ಸೀಸನ್‌ನ ಸೆಮಿಫೈನಲ್‌ನಲ್ಲಿ ಚೆನ್ನೈ ತಂಡ ಕರ್ನಾಟಕವನ್ನು ಸೋಲಿಸಿ ಹೊರಹಾಕಿತ್ತು. ಈ ಬಾರಿ ಅದೇ ಸೆಮಿಫೈನಲ್ ಹಂತದಲ್ಲಿ ಚೆನ್ನೈ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಕಿಚ್ಚ ಸುದೀಪ್ ಪಡೆ ಹಳೆಯ ಸೋಲಿಗೆ ಸರಿಯಾದ “ಪ್ರತೀಕಾರ” ತೀರಿಸಿಕೊಂಡಿದೆ.

ಈ ಪಂದ್ಯದ ಅಸಲಿ ಹೀರೋ ಜೆಕೆ. ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಆಟವಾಡಿದ ಅವರು 44 ಎಸೆತಗಳಲ್ಲಿ 50 ರನ್ (4 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು.

ಚೆನ್ನೈ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಡಾರ್ಲಿಂಗ್ ಕೃಷ್ಣ, ಚಂದನ್ ಕುಮಾರ್ ಮತ್ತು ಸಚಿನ್ ಅವರ ಬೌಲಿಂಗ್ ಪ್ರದರ್ಶನ ಪ್ರಮುಖವಾಗಿತ್ತು.ಈ ಗೆಲುವಿನ ಹಿಂದೆ ಒಂದು ಸ್ವಾರಸ್ಯಕರ ಸಂಗತಿಯಿದೆ. ಪಂದ್ಯದ ಮೊದಲು ನಾಯಕ ಕಿಚ್ಚ ಸುದೀಪ್ ಅವರು ಜೆಕೆಗೆ ಒಂದು ಚೀಟಿಯನ್ನು ನೀಡಿ, ಅದರಲ್ಲಿ “ನೀನು ಇಂದು ಅದ್ಭುತವಾಗಿ ಆಡುತ್ತೀಯ” ಎಂದು ಬರೆದು ಜೇಬಿನಲ್ಲಿಟ್ಟುಕೊಳ್ಳಲು ಹೇಳಿದ್ದರಂತೆ. ಆ ಆತ್ಮವಿಶ್ವಾಸವೇ ಜೆಕೆ ಅವರ ಆಟದಲ್ಲಿ ಪ್ರತಿಫಲಿಸಿತು ಎನ್ನಲಾಗುತ್ತಿದೆ.

ಫೈನಲ್ ಪಂದ್ಯವು ಇಂದು (ಫೆಬ್ರವರಿ 1, 2026) ಕೊಯಮತ್ತೂರಿನಲ್ಲಿ ನಡೆಯಲಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದೆ. 2024ರ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋತಿದ್ದ ಕರ್ನಾಟಕಕ್ಕೆ, ಇದು ಮತ್ತೊಂದು ಸೇಡಿನ ಮತ್ತು ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಸುವರ್ಣ ಅವಕಾಶ.

Leave a Reply

Your email address will not be published. Required fields are marked *