ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕರ್ನಾಟಕ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಬಿಡುಗಡೆಗೆ ಸಿದ್ಧವಾಗಿರುವ ‘ಬಾಸ್’ ಕನ್ನಡ ಚಲನಚಿತ್ರದ ಬಿಡುಗಡೆಗೆ ತಡೆ ಕೋರಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಶುಕ್ರವಾರ (ಜುಲೈ 17) ವಜಾಗೊಳಿಸಿದ್ದು, ಚಿತ್ರದ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರಿದೆ.

ಏನಿದು ಪ್ರಕರಣ? ತಮ್ಮ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಥೆಯನ್ನೇ ಹೋಲುವಂತೆ ‘ಬಾಸ್’ ಚಿತ್ರವನ್ನು ನಿರ್ಮಿಸಲಾಗಿದ್ದು, ಈ ಚಿತ್ರ ಬಿಡುಗಡೆಯಾದರೆ ತಮ್ಮ ನ್ಯಾಯಯುತ ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ಆರೋಪಿಸಿದ್ದರು. ಈ ಸಂಬಂಧ ಕೆಳಹಂತದ ಸಿವಿಲ್ ಕೋರ್ಟ್ ಚಿತ್ರದ ಬಿಡುಗಡೆ ಮೇಲಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ಆದೇಶದಲ್ಲಿ ಏನಿದೆ? ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ಚಿತ್ರದ ಬಿಡುಗಡೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ “ಕಾನೂನುಬಾಹಿರತೆ” ಕಂಡುಬಂದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇಂದೇ ಚಿತ್ರ ಬಿಡುಗಡೆ: ನ್ಯಾಯಾಲಯದ ಈ ಆದೇಶದಿಂದಾಗಿ ಸುಮಾರು ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಸಿರಿ ಪ್ರೊಡಕ್ಷನ್ಸ್ (ತನುಷ್ ಸಿನಿಮಾಸ್) ಲಾಂಛನದಲ್ಲಿ ಲವಾ ವಿ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ತನುಷ್ ಶಿವಣ್ಣ ನಾಯಕರಾಗಿ ನಟಿಸಿರುವ ‘ಬಾಸ್’ ಸಿನಿಮಾವು ಶುಕ್ರವಾರ ಸಂಜೆಯಿಂದಲೇ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಕೋರ್ಟ್ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಚಿತ್ರತಂಡ, “ಇದು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ” ಎಂದು ಬಣ್ಣಿಸಿದೆ.
