ಅಚ್ಚರಿಯ ಕತೆಗಾರ, ಸಹೃದಯಿ Guru Prasad Kantalagere ಅವರ ಬರಹಗಳೆಂದರೆ ನನಗೆ ಯಾವಾಗಲೂ ಸೋಜಿಗವೇ. ತುಮಕೂರು ಗ್ರಾಮೀಣ ಭಾಷೆಯನ್ನು ಕಾವ್ಯಾತ್ಮಕ ಗದ್ಯದಲ್ಲಿ ಬಳಸುವ ಗುರುಪ್ರಸಾದ್ ಸದಾಕಾಲ ಬರೆಯುವ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ. ತಾನು ಸೃಷ್ಟಿಸುವ ಪಾತ್ರಗಳನ್ನು ಎಲ್ಲೂ ಜಾಳು ಮಾಡದೆ, ಅವುಗಳಿಗೆ ಸೂಕ್ತ ಅಸ್ಮಿತೆಯನ್ನು ಕಲ್ಪಿಸುವ ಸೂಕ್ಷ್ಮ ಲೇಖಕ ಈ ಗುರು. ಇಂಥ ಲೇಖಕನ ಅನುಭವ ಕಥನ ‘ಟ್ರಂಕು ತಟ್ಟೆ’ ನಾಳೆ ಸಂಜೆ ಬಿಡುಗಡೆಗೊಳ್ಳಲಿದೆ. ಆ ಕೃತಿಯ ನಾಲ್ಕು ಆಯ್ದಭಾಗಗಳನ್ನು ಓದುಗರಿಗಾಗಿ ಈ ಕೆಳಗೆ ನೀಡಲಾಗಿದೆ.
-ವಿ.ಆರ್.ಕಾರ್ಪೆಂಟರ್

ಆಹ್ವಾನ ಪತ್ರಿಕೆ

ತಿಗತೊಳೆಯಲು ಟ್ರೈನ್ ಬಳಕೆ!
ಕೆಲ ದಿನಗಳ ಕಾಲ ನನಗೂ ಮತ್ತು ನಮ್ಮ ಮಾವನ ಮಗ ಮುರುಳಿಗೂ ರಾತ್ರಿ ಊಟ ಮಾಡಿದ ತಕ್ಷಣ ಲೆಟ್ರಿನ್‌ಗೆ ಅವಸರವಾಗುತಿತ್ತು. ಇಬ್ಬರೂ ತೋಟದಲ್ಲಿ ಲೆಟ್ರಿನ್ ಮಾಡಿ ತೊಳೆದುಕೊಳ್ಳಲು ನೀರಿಲ್ಲದುದರಿಂದ ಒಂದು ಉಪಾಯ ಮಾಡಿದೆವು. ನಮ್ಮ ಸಂಬಂಧಿ ಹುಡುಗರೆಲ್ಲ ಕೆಲವೊಮ್ಮೆ ಶನಿವಾರದ ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಊರುಗಳಿಗೆ ಹಿಂತಿರುಗುವಾಗ ರೈಲಿನಲ್ಲಿ ಪ್ರಯಾಣಿಸಿ ಬಾಣಸಂದ್ರ ಸ್ಟಾಪ್‌ನಲ್ಲಿ ಇಳಿದು ಊರು ತಲುಪುತ್ತಿದ್ದೆವು. ಆಗ ನಮಗೆ ರೈಲಿನಲ್ಲಿರುವ ಸೌಲಭ್ಯಗಳ ಪರಿಚಯವಿತ್ತು. ಅಲ್ಲಿರುವ ಶೌಚಾಲಯ, ಅದರಲ್ಲಿ ಬರುವ ನೀರು ಎಲ್ಲವೂ ನಮಗೆ ಕೌತುಕ ಉಂಟುಮಾಡಿತ್ತು. ನಾನು ಮತ್ತು ಮುರುಳಿ ಒಂದು ದಿನ ಆ ಊಹೆಯ ಮೇರೆಗೆ ರೈಲ್ವೆ ಸ್ಟೆಷನ್‌ಗೆ ಚಡ್ಡಿ ಎಳೆದುಕೊಂಡು ಹೋದೆವು. ನಮ್ಮ ಅದೃಷ್ಟಕ್ಕೆ ಏಳು ಗಂಟೆಯ ಸುಮಾರಿಗೆ ಒಂದು ರೈಲು ಬಂದು ನಿಂತಿತು. ಇಳಿಯುವವರು ಇಳಿಯುತ್ತಲೇ ಇದ್ದರು, ನಾವು ಅವರ ಸಂದಿಯಲ್ಲೇ ನುಸುಳಿ ರೈಲು ಹತ್ತಿ ತಲಾಗೊಂದೊಂದು ಶೌಚಾಲಯ ನೋಡಿಕೊಂಡು ಅವಸರಕ್ಕೆ ತೊಳೆದುಕೊಂಡು ಹೊರ ಬಂದುಬಿಟ್ಟೆವು. ಕೆಳಗಿಳಿದ ಸ್ವಲ್ಪ ಹೊತ್ತಿಗೆ ರೈಲು ಹೊರಟು ಹೋಯಿತು. ಆ ದಿನದ ಕಾರ್ಯಾಚರಣೆಯಿಂದ ಯಶ ಕಂಡ ನಾವು ಮುಂದಿನ ಕೆಲ ದಿನಗಳ ಕಾಲ ಅದನ್ನೇ ಮುಂದುವರಿಸಿದೆವು. ಆದರೆ ಒಂದು ದಿನ ರೈಲು ಇಳಿಯುವವರು ಹೆಚ್ಚಾಗಿದ್ದುದರಿಂದ ನಾವು ಅತ್ತುವುದು, ಶೌಚಾಲಯ ಪ್ರವೇಶಿಸುವುದು, ಚಡ್ಡಿ ಬಿಚ್ಚುವುದು, ತೊಳೆಯುವುದು ತಡವಾಗಿ ರೈಲು ಹೊರಟೇ ಬಿಟ್ಟಿತು. ಭಯ ಭೀತರಾದ ನಾವು ಚಲಿಸುವ ಗಾಡಿಯಲ್ಲಿ ನೆಗೆಯಬೇಕಾಗಿ ಬಂತು. ನಾವು ನೆಗೆದಿದ್ದನು ಕಂಡ ಅಲ್ಲಿದ್ದವರು ಬಾಯಿ ಮಾಡಿದರು. ಇನ್ನಷ್ಟು ಹೆದರಿದ ನಾವು ಇನ್ನ ಅತ್ತ ತಲೆ ಹಾಕುವುದನ್ನ ನಿಲ್ಲಿಸಿಬಿಟ್ಟೆವು.
ಶನಿವಾರ ಬಂತೆಂದರೆ ಹಾಸ್ಟೆಲ್‌ನ ಬಹುತೇಕ ಹುಡುಗರು ತಮ್ಮ ತಮ್ಮ ಊರುಗಳಿಗೆ ಹೊರಟು ಬಿಡುತ್ತಿದ್ದರು. ಊರಿಗೆ ಹೋಗುವವರನ್ನ ಕಂಡರೆ ವಾರ್ಡ್‌ನ್‌ಗೆ ಎಲ್ಲಿಲ್ಲದ ಪ್ರೀತಿ. ಬಸ್‌ಚಾರ್ಜ್ ಇಲ್ಲವೆಂದರೆ ಅವರೇ ಸಾಲ ಕೊಟ್ಟು ಕಳುಹಿಸುತ್ತಿದ್ದರು. ಅದನ್ನು ಸೋಮುವಾರ ಬಂದಾಗ ವಾಪಾಸ್ ಕೊಡಬೇಕಾಗಿತ್ತು. ಕೆಲ ವಿದ್ಯಾರ್ಥಿಗಳನ್ನು ಕರೆಯುವವರು ಕಳುಹಿಸುವವರು ಇಲ್ಲದುದರಿಂದಾಗಿ ಹಾಸ್ಟೆಲ್‌ನಲ್ಲೆ ಉಳಿದುಬಿಡುತ್ತಿದ್ದರು. ಉಳಿದುಕೊಳ್ಳುವವರನ್ನ ಕಂಡರೆ ವಾರ್ಡನ್‌ಗಿಂತಲೂ ಅಡುಗೆ ಭಟ್ಟರಿಗೆ ಕೋಪ. ಏಕೆಂದರೆ ಒಬ್ಬ ಹುಡುಗ ಉಳಿದರೂ ಅಡುಗೆ ಮಾಡಬೇಕಾಗುತಿತ್ತು. ಹುಡುಗರು ಯಾರೂ ಇಲ್ಲವೆಂದರೆ ಅವರು ರಜಾ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಹಾಯಾಗಿರುತ್ತಿದ್ದರು. ಭಾನುವಾರ ಉಳಿದುಕೊಂಡವರಿಗೆ ಬೆಳಗ್ಗೆ ಚಪಾತಿ ಮಾಡಿಕೊಡುತ್ತಿದ್ದರು. ವಾರಪೂರ್ತಿ ಮುದ್ದೆ ತಿನ್ನುತ್ತಿದ್ದ ಹುಡುಗರಿಗೆ ಚಪಾತಿ ವಿಶೇಷವಾಗಿ ಕಾಣುತಿತ್ತು. ಚಪಾತಿಗೋಸ್ಕರವೆ ಕೆಲವೊಮ್ಮೆ ಉಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುತಿತ್ತು.
ನಾವು ವಾರಕೊಮ್ಮೆ ಊರಿಗೆ ಹೋದಾಗ ಭಾನುವಾರ ವಶೇಷ ಸ್ನಾನ ಮಾಡಿಕೊಂಡು ಸೋಮುವಾರ ಹಾಸ್ಟೆಲ್ಗೆ ವಾಪಾಸ್ ಆಗುತ್ತಿದ್ದೆವು. ಅಕಸ್ಮಾತ್ ಹಾಸ್ಟೆಲ್‌ನಲ್ಲೇ ಉಳಿದುಕೊಂಡರೆ ಸ್ನಾನ ಎಂಬುದು ಹದಿನೈದು ದಿನಕ್ಕೆ ಶಿಫ್ಟ್ ಆಗುತಿತ್ತು. ಆದರೂ ಆಗೊಮ್ಮೆ ಈಗೊಮ್ಮೆಗೆ ನೀರಾಕಿಕೊಳ್ಳುವ ಶಾಸ್ತ್ರ ನಡೆಸುತ್ತಿದ್ದೆವು. ಹಾಸ್ಟೆಲ್‌ನಲ್ಲಂತೂ ನೀರು ಸಿಗುತ್ತಿರಲಿಲ್ಲ. ಸಿಕ್ಕರೂ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ದೊಡ್ಡ ಹುಡುಗರಿಗೆ, ಇಲ್ಲವೆ ಯಾರು ಭಟ್ಟರಿಗೆ ಮುದ್ದೆ ಕಟ್ಟುವ ಕೆಲಸಕ್ಕೆ ಸಹಾಯ ಮಾಡುತ್ತಿದ್ದರೋ ಅವರಿಗೆ ಅಡುಗೆ ಮನೆಯಲ್ಲಿಯೆ ಕಾದ ನೀರಿನ ಸ್ನಾನಕ್ಕೆ ಅವಕಾಶ ಸಿಗುತಿತ್ತು. ನಮ್ಮಂತಹ ಹುಡುಗರು ಗುಂಪುಗುಂಪಾಗಿ ಸೊಂಟಕ್ಕೆ ಟವಲ್ ಸುತ್ತಿಕೊಂಡು ನೀರು ಹುಡುಕಿಕೊಂಡು ತಿಪಟೂರಿನ ಆಚೆಗಿದ್ದ ಈಡೇನಹಳ್ಳಿ ಕೆರೆಗೆ ಹೋಗುತ್ತಿದ್ದೆವು. ಅಲ್ಲಿ ಒಂದು ಬಗುಡದ ನೀರಿನ ಕೆರೆಯಿತ್ತು. ಒಂದಿಬ್ಬರು ಹೆಂಗಸರು ತುಸು ದೂರದಲ್ಲಿ ಬಟ್ಟೆ ಹೊಗೆಯುತ್ತಿದ್ದುದ್ದನ್ನು ಬಿಟ್ಟರೆ ಅದು ಬಹುತೇಕ ನಿರ್ಜನ ಪ್ರದೇಶವಾಗಿತ್ತು. ಅಲ್ಲೇ ದಡದಲ್ಲಿ ಟವಲ್ ಬಿಸಾಕಿ ಈಜಾಡುವವರಂತೆ ಅದರಲ್ಲಿ ಬಿದ್ದು ಒದ್ದಾಡಿ ಎದ್ದು ಬರುತ್ತಿದ್ದೆವು. ಅಲ್ಲಿಗೆ ಆ ವಾರದ ಸ್ನಾನದ ಕಾರ್ಯಕ್ರಮ ಸಮಾಪ್ತಿಗೊಳ್ಳುತ್ತಿತ್ತು.‌

ಲೇಖಕ ಗುರುಪ್ರಸಾದ್‌ ಕಂಟಲಗೆರೆ

ಊಟ ತಿಂಡಿ, ಮೊಟ್ಟೆ ಬಾಳೆಹಣ್ಣು
ಪ್ರತಿದಿನ ಸಂಜೆ ಆರುವರೆಗೆಲ್ಲ ರಾತ್ರಿ ಊಟ ನೀಡಿಬಿಡುತಿದ್ದರು. ಇನ್ನು ಸೂರ್ಯ ಮುಳುಗಿರುತ್ತಲೆ ಇರಲಿಲ್ಲ. ಅಷ್ಟೊತ್ತಿಗಾಗಲೆ ನಾವು ಉಂಡು ತಿರುಗಾಡುತಿದ್ದೆವು. ಅದ್ಯಾವ ಕಾರಣಕ್ಕೆ ಅಷ್ಟು ಬೇಗ ನೀಡುತ್ತಿದ್ದರೊ ತಿಳಿಯದು. ಬಹುಶಃ ಭಟ್ಟರು ತಮ್ಮ ಕೆಲಸವನ್ನು ಬೇಗ ಮುಗಿಸಿಕೊಂಡು ಮನೆ ತಲುಪಲಿಕ್ಕಿರಬೇಕು. ಬಹುತೇಕ ಬಸವರಾಜಪ್ಪನೆಂಬ ಸೆಣಕಲು ಭಟ್ಟ ತನ್ನ ಬೆವರಿದ ಮೈಯಿಂದ ರೋಸು ತೆಗೆದು ಹುಡುಗರ ಮೇಲೆ ಬೀಸುತ್ತ ’ತಟ್ಟೆ ತಗಳ್ರಿ’ ಎಂದರೆ ಸಾಕು, ಒಮ್ಮೆಲೆ ಹಾಸ್ಟೆಲ್ ತಟ್ಟೆಗಳ ಸದ್ದಿನಿಂದ ದಡಗುಡುತ್ತಿತ್ತು. ಕ್ಷಣ ಮಾತ್ರದಲ್ಲಿ ತಟ್ಟೆ ತೊಳೆಯುವ ಶಾಸ್ತ್ರ ಮುಗಿಸಿ ಡೈನಿಂಗ್ ಹಾಲೆಂಬ ಕಿರಿದಾದ ಚೌಕಾಕಾರದ ಕೋಣೆಯಲ್ಲಿ ಒಬ್ಬರ ಮೇಲೊಬ್ಬರು ತೊಡೆ ಹಾಕಿಕೊಂಡು ಇಕ್ಕಟ್ಟಾಗಿ ಕುಳಿತುಕೊಳ್ಳುತ್ತಿದ್ದೆವು. ಹತ್ತನೇಕ್ಲಾಸ್ ಹುಡುಗರಿಂದ ಶುರುವಾಗುವ ಅಂತಿ ನಮ್ಮಂಥ ಪಿಳ್ಳೆ ಪಿಸ್ಕುಗಳೊಂದಿಗೆ ಕೊನೆಯಾಗುತ್ತಿತ್ತು. ಊಟ ಬಡಿಸುವುದೂ ಕೂಡ ದೊಡ್ಡ ಹುಡುಗರಿಂದಲೇ ಪ್ರಾರಂಭಗೊಳ್ಳುತ್ತಿತ್ತು. ಮೊದಲು ಒಂದು ಸಣ್ಣ ಚಂಡಿನಂತ ಮುದ್ದೆಯನ್ನು ಎಲ್ಲರಿಗೂ ಸಮಾನವಾಗಿ ಬಡಿಸಿಕೊಂಡು ಬರುತ್ತಿದ್ದರು. ಬೇಕೆಂದರೆ ಇನ್ನ ಅರ್ಧ ಮುದ್ದೆ ಹೆಚ್ಚಾಗಿ ಸಿಗುತ್ತಿತ್ತು. ಅದರ ಮೇಲೆ ಸಿಗುತ್ತಿರಲ್ಲಿಲ್ಲ. ಆ ನಂತರ ಉಡಿ ಉಡಿಯಾದ ಅನ್ನ ತರುತ್ತಿದ್ದರು. ಅದು ಮಾತ್ರ ಒಂದು ಸ್ಪೂನಿನ ಮೇಲೆ ಬರುತ್ತಿರಲ್ಲಿಲ್ಲ. ಅನ್ನ ಒಂದು ಸುತ್ತು ಬಂದಾದ ಮೇಲೂ ಪಾತ್ರೆಯ ತಳದಲ್ಲಿ ಉಳಿದಿದ್ದರೆ, ಅದನ್ನ ಪುನಃ ದೊಡ್ಡ ಹುಡುಗರ ಕಡೆಯಿಂದ ಚೂರು ಚೂರು ಚುಮುಕಿಸಿಕೊಂಡು ಬರುತ್ತಿದ್ದರು. ನಾವು ಆಸೆಗಣ್ಣಿನಿಂದ ನಾವಿರುವಲ್ಲಿಗೂ ಬರಬಹುದಾ ಎಂದು ಕಾಯುತ್ತಿದ್ದರೆ, ಅದು ಮಧ್ಯದಲ್ಲೇ ನಿಂತು ಬಿಡುತ್ತಿತ್ತು. ಬಹುತೇಕ ಕಡ್ಲೆಕಾಳಿನ ಸಾರು ಮಾಡುತ್ತಿದ್ದರು. ಅದರ ರುಚಿ ನಮಗೆ ತಿಳಿಯುತ್ತಿರಲ್ಲಿಲ್ಲ. ವಾರಕ್ಕೆರಡು ದಿನ ಬೇಯಿಸಿದ ಕೋಳಿ ಮೊಟ್ಟೆಯನ್ನು ಊಟದ ಜತೆಗೆ ನೀಡುತ್ತಿದ್ದರು. ಮೊಟ್ಟೆಯ ದಿನವಂತೂ ಎಲ್ಲಿ ಬೇಗ ಖಾಲಿಯಾಗಿಬಿಡುತ್ತದೊ ಎಂದು ತಿನ್ನಲೋ ಬೇಡವೋ ಎಂಬಂತೆ ಚೂರು ಚೂರೇ ಮುರಿದು ಬಾಯಿಗಿಕ್ಕಿಕೊಳ್ಳುತ್ತಿದ್ದೆವು. ಕೆಲವರು ಉಬ್ಬತ್ತಿದವರಂತೆ ಕೊಟ್ಟ ತಕ್ಷಣವೇ ಒಂದೇ ಉಸಿರಿಗೆ ನುಂಗಿ ಖಾಲಿಯಾದದ್ದಕ್ಕಾಗಿ ಮಕ ಉಳ್ಳಗೆ ಮಾಡಿಕೊಳ್ಳುತ್ತಿದ್ದರು. ಎಲ್ಲರಿಗೂ ಕೊಟ್ಟಾದ ಮೇಲೂ ಕೆಲವೊಮ್ಮೆ ಮೊಟ್ಟೆಗಳು ಮಿಕ್ಕುತ್ತಿದ್ದವು. ಮಿಕ್ಕಿದವುಗಳನ್ನು ತಟ್ಟೆಯಲ್ಲಿಟ್ಟು ಚಾಕುವಿನಿಂದ ಚೂರು ಚೂರಾಗಿ ಕತ್ತರಿಸಿ, ಮತ್ತೆ ಸಣ್ಣ ಸಣ್ಣ ಪೀಸುಗಳನ್ನು ಹಂಚುತ್ತ ಬರುತ್ತಿದ್ದರು. ಅದೂ ಕೂಡ ನಾವಿರುವಲ್ಲಿಗೆ ಬರಲಾರದೆ ಮಧ್ಯದಲ್ಲೇ ಖಾಲಿಯಾಗಿಬಿಡುತ್ತಿತ್ತು. ಆಗ ನಾವು ಇನ್ನಷ್ಟು ನಿರಾಶರಾಗುತ್ತಿದ್ದೆವು. ಕೆಲ ಹುಡುಗರು ತಮ್ಮ ಪಾಲಿನ ಮೊಟ್ಟೆಯನ್ನು ತಿನ್ನದೆ ಮಾರಿಕೊಂಡು, ಬಂದ ದುಡ್ಡಿನಿಂದ ದುಡ್ಡಿನಾಟ ಆಡುತ್ತಿದ್ದರು.

ತಿಪಟೂರು ಕೊಬರಿಯಂತೆ ಬಾಳೆಹಣ್ಣಿಗೂ ಪ್ರಸಿದ್ಧಿ. ಐವತ್ತುಪೈಸೆ ಕೊಟ್ಟರೆ ಉದ್ದದ ಪಚ್ಚ ಬಾಳೆಹಣ್ಣು ಸಿಗುತ್ತಿತ್ತು. ವಾರಕ್ಕೆರಡು ದಿನ ಬಾಳೆಹಣ್ಣನ್ನು ದಿನ ಬಿಟ್ಟು ದಿನ ಕೊಡುತ್ತಿದ್ದರು. ನಾವು ಬಾಳೆಹಣ್ಣನ್ನು ತಿಂದಾದಮೇಲೆ ಸಿಪ್ಪೆಯನ್ನು ಪೇಪರ್‌ನಂತಾಗುವವರೆಗೂ ಕವರುತ್ತಿದ್ದೆವು. ಕೆಲ ಹುಡುಗರು ’ನಾನು ಸಿಪ್ಪೆಯನ್ನು ಎಸೆಯಲೇ ಇಲ್ಲ, ಪೂರ್ತಿ ತಿಂದೆ’ ಎಂದು ಹೇಳುತ್ತಿದ್ದರು. ನಮ್ಮ ಪಕ್ಕದಲ್ಲೇ ಇದ್ದ ಬಿಸಿಎಮ್ ಹಾಸ್ಟೆಲ್‌ನ ಹುಡುಗರಿಗೆ ಮೊಟ್ಟೆ ಕೊಡುತ್ತಿರಲಿಲ್ಲ. ಅವರು ನಾವು ತಿನ್ನುವುದನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು. ಇನ್ನ ಕೆಲವರು ನಮ್ಮ ಹುಡುಗರಿಗೆ ಎಂಟಾಣಿನೊ, ಒಂದ್ರುಪಾಯಿನೋ ಕೊಟ್ಟು ಅವರದಾಗಿಸಿಕೊಳ್ಳುತ್ತಿದ್ದರು.

ಮುದ್ದೆ ಕಟ್ಟುತ್ತಿದ್ದ ಗುಲ್ಜಾರ್ ಖಾನ್
ಗುಲ್ಜಾರ್‌ಖಾನ್ ಎಂಬ ಕಪ್ಪಗೆ ದುಂಡು ದುಂಡಾಗಿದ್ದ ಹುಡುಗನಿದ್ದ. ಅದು ಅವನ ಅಡ್ಡ ಹೆಸರಾಗಿತ್ತು. ಅವನನ್ನು ಎಲ್ಲಾ ಹುಡುಗರು ವಿಚಿತ್ರವಾಗಿ ನೋಡುತ್ತಿದ್ದರು. ಅವನ ರಗ್ಗು ಕಾರ್ಪೆಟ್‌ಗಳು ಸುಮಾರು ವರ್ಷದಿಂದ ನೀರು ಕಾಣದೆ ಕಪ್ಪು ಬಣ್ಣಕ್ಕೆ ತಿರುಗಿದ್ದವು. ಯೂನಿಫಾರ್ಮ್ ಬಟ್ಟೆಗಳು ಕೂಡ ತಿಂಗಳಾನುಗಟ್ಟಲೆ ನೀರು ಕಾಣುತ್ತಿರಲಿಲ್ಲ. ಬಟ್ಟೆಯಲ್ಲಿ ಕೂರೆಗಳು, ತಲೆಯಲ್ಲಿ ಹೇನುಗಳು ಪಿತಗುಟ್ಟುತ್ತಿದ್ದವು. ಸದಾ ಮೈಯನ್ನು ಪರಪರನೆ ಕೆರೆದುಕೊಳ್ಳುತ್ತಿದ್ದ. ಆತನ ಕಾಲಿನ ತುಂಬ ಗಾಯಗಳಾಗಿ ರಕ್ತ ಸೋರುತ್ತಿರುತ್ತಿತ್ತು. ಅವನು ಕಜ್ಜಿ ಎಂದೇ ಫೇಮಸ್ ಆಗಿದ್ದುದರಿಂದ ಆತನನ್ನು ಮುಟ್ಟಿಸಿಕೊಳ್ಳಲು ಹುಡುಗರು ಹೆದರಿ ಓಡುತ್ತಿದ್ದರು. ಆತನೆ ಮೇಲ್ಬಿದ್ದು ಮುಟ್ಟಲು ಹಟ್ಟಿಸಿಕೊಂಡು ಬರುತ್ತಿದ್ದ. ಅವನು ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಓಡಿ ಬಂದು ’ಡಾರ್ಲಿಂಗ್’ ಎಂದು ಎಲ್ಲರನ್ನೂ ಅವಚಿಕೊಳ್ಳಲು ಪ್ರಯತ್ನಿಸುತ್ತಿದ್ದ. ಬಹುಶಃ ಎಲ್ಲರೂ ಅವನನ್ನು ದೂರವಿರಿಸುತ್ತಿದ್ದುದೇ ಅವನ ಈ ನಡವಳಿಕೆಗೆ ಕಾರಣವಿರಬಹುದು. ನನ್ನನ್ನು ಎಷ್ಟೋ ಸರ್‍ತಿ ಯಾಮಾರಿಸಿ ಅವಚಿಕೊಂಡುಬಿಡುತ್ತಿದ್ದ. ಅವನ ಅಪ್ಪುಗೆಗೆ ಸಿಕ್ಕಿರುವುದು ಗೊತ್ತಾದರೆ ಇತರರು ನಮ್ಮನ್ನು ಈಯಾಳಿಸುತ್ತಿದ್ದರು. ಮುಟ್ಟಿಸಿಕೊಳ್ಳುತ್ತಿರಲಿಲ್ಲ.
ಅಡುಗೆ ಭಟ್ಟರು ಕೆಲ ಹುಡುಗರನ್ನು ಮುದ್ದೆ ಕಟ್ಟಲು ಬಳಸಿಕೊಳ್ಳುತ್ತಿದ್ದರು. ಮುದ್ದೆ ಕಟ್ಟುವ ಹುಡುಗರಿಗೆ ಭಟ್ಟರು ಕದ್ದು ಮುಚ್ಚಿ ಜಾಸ್ತಿ ಊಟಕೊಡುತ್ತಿದ್ದರು. ಆದ್ದರಿಂದ ಕೆಲ ಹುಡುಗರು ಸ್ವಯಂ ಪ್ರೇರಣೆಯಿಂದ ಮುದ್ದೆ ಕಟ್ಟಲು ಮುಂದಾಗುತ್ತಿದ್ದರು. ಇದನ್ನು ಕಂಡ ಕೆಲ ದೊಡ್ಡ ಹುಡುಗರು ಮುದ್ದೆ ಕಟ್ಟಲು ವಿದ್ಯಾರ್ಥಿಗಳನ್ನ ಬಳಸಿಕೊಳ್ಳಬಾರದೆಂದು ವಾರ್ಡನ್‌ಗೆ ದೂರು ಕೊಟ್ಟಿದ್ದರು. ಈ ಸಂಬಂಧ ವಾರ್ಡ್‌ನ್ ಗಲಾಟೆ ಮಾಡಿದ್ದರಿಂದಾಗಿ ಎಲ್ಲಾ ಹುಡುಗರು ಕೆಲ ದಿನಗಳವರೆಗೆ ಅಡುಗೆ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನ ನಿಲ್ಲಿಸಿಬಿಟ್ಟಿದ್ದರು. ಆದರೆ ಗುಲ್ಜಾರ್ ಖಾನ್ ಮಾತ್ರ ಯಾರ ಮಾತನ್ನೂ ಕೇಳದೆ ಮುದ್ದೆ ಕಟ್ಟಲು ಹೋಗುತ್ತಿದ್ದನು. ಆತ ಮುದ್ದೆ ಕಟ್ಟಿದ್ದಾನೆಂದು ತಿಳಿದರೆ, ಆ ದಿನ ನಾವು ಉಣ್ಣಲು ಅಸಹ್ಯಪಟ್ಟುಕೊಳ್ಳುತ್ತಿದ್ದೆವು. ಆತ ಅದ್ಯಾವುದಕ್ಕೂ ಕೇರ್ ಮಾಡುತ್ತಿರಲ್ಲಿಲ್ಲ.

ನಮ್ಮ ಹಾಸ್ಟೆಲ್‌ನ ಗೋಡೆಯ ಮೇಲೆ ಪ್ರತಿದಿನದ ತಿಂಡಿಗಳಾದ ಉಪ್ಪಿಟ್ಟು, ಚಿತ್ರಾನ್ನ, ಅವಲಕ್ಕಿ, ಇಡ್ಲಿ ಮುಂತಾದ ರುಚಿಯಾದ ಹೆಸರುಗಳನ್ನ ಬರೆಯಲಾಗಿತ್ತು. ಊರಲ್ಲಿ ತಂಗಳು ಅನ್ನವನ್ನೊ, ಮುದ್ದೆಯನ್ನೊ, ರೊಟ್ಟಿಯನ್ನೊ ತಿಂದುಕೊಂಡಿದ್ದ ನಮಗೆ ಅದನ್ನು ಕಂಡು ಬಾಯಿ ನೀರು ಬರುತ್ತಿತ್ತು. ಪ್ರತಿನಿತ್ಯ ಬೆಳಗ್ಗೆ ಒಂಭತ್ತು ಮೂವತ್ತಕ್ಕೆ ಊಟ ಕೊಡುತ್ತಿದ್ದರು. ನಾವು ಉಣ್ಣುವಾಗ ತಟ್ಟೆಯ ಪಕ್ಕದಲ್ಲಿ ಒಂದೊಂದು ಬಾಕ್ಸ್ ಇಟ್ಟುಕೊಳ್ಳಬೇಕಾಗಿತ್ತು. ಬೆಳಗ್ಗೆ ಗಡತ್ತಾಗಿ ಮುದ್ದೆ ಅನ್ನ ಉಂಡಾದ ನಂತರ, ಭಟ್ಟರು ಬಾಕ್ಸ್‌ಗೆ ಚಿತ್ರಾನ್ನವನ್ನೊ ಉಪ್ಪಿಟ್ಟನ್ನೊ ಹಾಕಿಕೊಂಡು ಬರುತ್ತಿದ್ದರು. ನಾವು ಅದನ್ನ ಸ್ಕೂಲಿಗೆ ತೆಗೆದುಕೊಂಡು ಹೋಗಿ ಮಧ್ಯಾಹ್ನ ತಿನ್ನಬೇಕಾಗಿತ್ತು. ಸ್ಕೂಲ್ ಹತ್ತಿರವೇ ಇದ್ದ ನಮ್ಮಂಥ ಹುಡುಗರು ಟ್ರಂಕಿನಲ್ಲಿ ಇಟ್ಟು ಹೋಗಿ ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ಹಾಸ್ಟೆಲ್‌ಗೆ ಬಂದು ತಿಂದು ಹೋಗುತ್ತಿದ್ದೆವು. ಕೆಲ ಹೊಟ್ಟೆ ಬಾಕ ಹುಡುಗರು ಮಧ್ಯಾಹ್ನದ ತಿಂಡಿಯನ್ನು ಬೆಳಗಿನ ಊಟದೊಂದಿಗೆ ತಿಂದುಬಿಡುತ್ತಿದ್ದರು. ಈ ವಿಷಯ ವಾರ್ಡ್‌ನ್‌ಗೇನಾದರೂ ಗೊತ್ತಾದರೆ ತಿಂದವರನ್ನ ಟ್ರಂಕಿನ ಸಂದಿಗೆ ಹಾಕಿಕೊಂಡು ದಡಿ ದಡಿನೆ ಗುದ್ದಿ ಬಿಡುತ್ತಿದ್ದರು.

ಕೃತಿಯ ಮುಖಪುಟ

ತಿಂಡಿ ಇದ್ದ ಬಾಕ್ಸ್‌ನಲ್ಲಿ ಕಲ್ಲು
ಬಹುತೇಕ ಶಾಲೆಗಳು ಮದ್ಯಾಹ್ನ ಒಂದು ಗಂಟೆಗೆ ತಿಂಡಿಗೆ ಬಿಡುತ್ತಿದ್ದವು. ಆಗ ಹಾಸ್ಟೆಲ್‌ಗೆ ಬಂದ ಹುಡುಗರು ಟ್ರಂಕ್ ತೆಗೆದು ಬೆಳಗ್ಗೆ ಇಟ್ಟು ಹೋಗಿದ್ದ ತಿಂಡಿ ತಿನ್ನಲು ಬಾಕ್ಸ್ ಓಪನ್ ಮಾಡಿ ನೋಡಿದರೆ, ಕೆಲವರ ಬಾಕ್ಸ್‌ನಲ್ಲಿ ತಿಂಡಿ ಇದ್ದರೆ ಇನ್ನ ಕೆಲವರ ಬಾಕ್ಸ್‌ನಲ್ಲಿ ತಿಂಡಿ ಖಾಲಿಯಾಗಿರುತ್ತಿತ್ತು. ತಿಂಡಿಯ ಬದಲಿಗೆ ಒಂದೊಂದು ಕಲ್ಲುಗಳಿರುತ್ತಿದ್ದವು. ವಿಚಿತ್ರವೆಂದರೆ ಟ್ರಂಕಿನ ಬೀಗ ಹಾಕಿಯೇ ಇರುತ್ತಿತ್ತು. ಹಸಿದು ಬಂದ ವಿದ್ಯಾರ್ಥಿಗಳಿಗೆ ಬಾಕ್ಸ್‌ನಲ್ಲಿದ್ದ ಕಲ್ಲು ಕಂಡು ಆಶ್ಚರ್ಯ ದುಃಖ ಎಲ್ಲವೂ ಆಗುತ್ತಿತ್ತು. ಬೆಳಗ್ಗೆ ಏನಾದರೂ ಮರೆತು ನಾನೇ ತಿಂದು ಹೋದೆನೆ ಎಂಬ ಅನುಮಾನವೂ ಬರುತ್ತಿತ್ತು. ಈ ವಿಚಿತ್ರದ ಗುಟ್ಟು ತಿಳಿಯದೆ ಹಸಿದ ಹೊಟ್ಟೆಯಲ್ಲೇ ಸ್ಕೂಲು ದಾರಿ ಹಿಡಿಯುತ್ತಿದ್ದೆವು. ಇದೇ ರೀತಿ ನಾಳೆಯೂ ಮರುಕಳಿಸಿದಾಗ, ಅನುಮಾನ ಬಾರದೆ ಇರುತ್ತಿರಲಿಲ್ಲ.

ಹಾರ್ಟ್‌ವೀಕ್ ಎಂಬ ಹುಡಗನಿದ್ದ. ಅದು ಅವನ ಅಡ್ಡ ಹೆಸರಾಗಿತ್ತು. ಲೆಕ್ಕ ಮಾಡಲು ಬಾರದೆ ಇದ್ದಾಗ ಮೇಷ್ಟ್ರ ಹೊಡೆತದಿಂದ ತಪ್ಪಿಸಿಕೊಳ್ಳಲು ’ಸಾ ನಾನು ಹಾರ್ಟ್ ಪೇಷಂಟು’ ಅಂತ ಸುಳ್ಳು ಹೇಳಿದ್ದನಂತೆ. ಅಂದಿನಿಂದ ಹಾಸ್ಟೆಲ್‌ನ ಎಲ್ಲಾ ಹುಡುಗರು ಅವನನ್ನು ಹಾಗಂತಲೇ ಕರೆಯುತ್ತಿದ್ದರು. ಒಂದು ದಿನ ಅವನು ಹಸಿದು ಬಂದು ಬಾಕ್ಸ್ ತೆಗೆದು ನೋಡಿದರೆ, ಅದರಲ್ಲಿ ತಿಂಡಿ ಬದಲಾಗಿ ಕಲ್ಲು ಇತ್ತು. ಕುಪಿತನಾದ ಹಾರ್ಟ್‌ವೀಕು ಬಾಯಿಗೆ ಬಂದಂತೆ ತಿಂಡಿ ತಿಂದವರನ್ನ ಎಂದೂ ಕೇಳಿರದ ಹೊಲಸು ಮಾತುಗಳಿಂದ ಬೈಯ್ಯತೊಡಗಿದ. ಬೈದೂ ಬೈದೂ ಸಾಕಾಗಿ ಮಧ್ಯಾಹ್ನ ಸ್ಕೂಲಿಗೆ ಹೋಗುವುದನ್ನ ತೆಜಿಸಿ ಟ್ರಂಕ್ ಸಂದಿಯಲ್ಲಿ ಮುದುಡಿಕೊಂಡು ಮಲಗಿದ. ಹಾರ್ಟ್‌ವೀಕ್‌ನ ಧಾರುಣ ಸ್ಥಿತಿ ಕಂಡು ಸಮಾನ ದುಃಖಿಗಳೆಲ್ಲ ಅವನಿಗೆ ಬೇಷರತ್ ಬೆಂಬಲ ಸೂಚಿಸಿ ಅವರೂ ತಿಂಡಿ ಕದ್ದವರನ್ನು ಬೈದುಕೊಂಡರು.
ರಾತ್ರಿಯ ಊಟದೊಂದಿಗೆ ಅವನ ಹಸಿವೂ ಕಳೆದು ಹೋಯಿತು. ಮರುದಿನ ಯಥಾ ಪ್ರಕಾರ ತಿಂಡಿ ಬಾಕ್ಸ್‌ನ್ನು ಟ್ರಂಕಿನಲ್ಲಿಟ್ಟು ಬೀಗ ಹಾಕಿ ಶಾಲೆಗೆ ಹೋದೆವು. ಮಧ್ಯಾಹ್ನ ಬಂದು ನೋಡಿದಾಗ ಹಾರ್ಟ್‌ವೀಕ್‌ನ ಬಾಕ್ಸ್‌ನಲ್ಲಿ ತಿಂಡಿಯ ಬದಲಿಗೆ ಮತ್ತೆ ಕಲ್ಲು! ವಿಶೇಷವೆಂದರೆ ಈಗ ಆ ಕಲ್ಲಿಗೆ ಒಂದು ಬಿಳಿ ಹಾಳೆ ಸುತ್ತಿಕೊಂಡಿತ್ತು. ಅದರಲ್ಲಿ ತಿಂಡಿ ತಿಂದವರನ್ನು ನಿನ್ನ ಅಣ್ಣತಮ್ಮಂದಿರೆಂದು ತಿಳಿದುಕೋ, ಬೈಯ್ಯಬೇಡ ಎಂದು ಬರೆದಿತ್ತು. ಈಗ ಹಾರ್ಟ್‌ವೀಕ್‌ನ ಸ್ಥಿತಿ ಹೇಳ ತೀರದು. ಮಾರನೆ ಬೆಳಗ್ಗೆ ಊಟವಾದ ಮೇಲೆ ಹಾರ್ಟ್‌ವೀಕ್ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್‌ನ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ’ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು. ಬೆಳಗಿನ ಉಗುಳು ಸಮೇತ ತಿಂದ. ಮುಂದೆ ಆತ ತಿಂಡಿಗೆ ಉಗಿದು ಹೋಗುವುದನ್ನ ಖಾಯಂಮಾಗಿಸಿಕೊಂಡಿದ್ದ. ಹಾರ್ಟ್‌ವೀಕ್‌ನ ಯಶಸ್ವಿ ಕಾರ್ಯಾಚರಣೆಯಿಂದ ಆಕರ್ಷಿತರಾದ ಅನೇಕ ಹುಡುಗರು ಅದನ್ನೆ ಅನುಸರಿಸಿ ಯಶ ಕಂಡರು.
ಹಾಸ್ಟೆಲ್‌ನಲ್ಲಿ ವಾರಕ್ಕೆರಡು ದಿನ ಇಡ್ಲಿ ಮಾಡುತ್ತಿದ್ದರು. ಮಧ್ಯಾಹ್ನದ ತಿಂಡಿಗೆ ಕೇವಲ ನಾಲ್ಕೇ ನಾಲ್ಕು ಗುಂಡಿಡ್ಲಿ ಹಾಕುತ್ತಿದ್ದರು. ಅದು ಯಾರಿಗೂ ಸಾಕಾಗುತ್ತಿರಲಿಲ್ಲ. ಇಡ್ಲಿ ಮಾಡಿದ ದಿನವಂತೂ ತಿಂಡಿ ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಅದ ಕಂಡು ಇಡ್ಲಿಯ ದಿನ ಬೆಳಗಿನ ಊಟದೊಂದಿಗೆ ಅದನ್ನೂ ತಿಂದು ಹೋಗಿ ಮಧ್ಯಾಹ್ನ ಉಪವಾಸವಿರುತ್ತಿದ್ದೆವು.

ಹೆಚ್ಚಿನ ಓದಿಗಾಗಿ ಪುಸ್ತಕ ಕೊಂಡು ಓದಿ…

Leave a Reply

Your email address will not be published. Required fields are marked *