ಬೆಂಗಳೂರು: ಪ್ರೆಶರ್ ಕುಕ್ಕರ್ ಪ್ರತಿಯೊಬ್ಬರ ಅಡುಗೆ ಮನೆಯ ಅವಿಭಾಜ್ಯ ಅಂಗ. ಕೆಲಸವನ್ನು ಸುಲಭ ಮತ್ತು ವೇಗವಾಗಿಸುವ ಈ ಸಾಧನವು ಸರಿಯಾಗಿ ಬಳಸದಿದ್ದರೆ ಜೀವಕ್ಕೆ ಕುತ್ತು ತರುವ ‘ಬಾಂಬ್’ ಆಗಿ ಪರಿಣಮಿಸಬಹುದು. ಇತ್ತೀಚೆಗೆ ಕುಕ್ಕರ್ ಸ್ಫೋಟದ ಸುದ್ದಿಗಳು ಕಳವಳ ಮೂಡಿಸುತ್ತಿದ್ದು, ಇದಕ್ಕೆ ಅಸಲಿ ಕಾರಣ ನಾವೇ ಮಾಡುವ ಸಣ್ಣ ತಪ್ಪುಗಳಾಗಿವೆ.

ಕುಕ್ಕರ್ ಬ್ಲಾಸ್ಟ್ ಆಗಲು ಪ್ರಮುಖ ಕಾರಣಗಳೇನು?
- ನೀರಿನ ಪ್ರಮಾಣದ ಕೊರತೆ: ಕುಕ್ಕರ್‌ನಲ್ಲಿ ಆಹಾರ ಬೇಯಲು ಕನಿಷ್ಠ ಪ್ರಮಾಣದ ನೀರು ಅಗತ್ಯ. ನೀರು ಪೂರ್ತಿ ಆವಿಯಾದಾಗ ಒಳಗೆ ಒತ್ತಡ ಅತಿಯಾಗಿ ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
- ಸೇಫ್ಟಿ ವಾಲ್ವ್ ಮತ್ತು ವಿಸ್ಲ್ ತಪಾಸಣೆ: ವಿಸ್ಲ್ ಬರುವ ರಂಧ್ರದಲ್ಲಿ ಆಹಾರದ ಕಣಗಳು ಸಿಕ್ಕಿಹಾಕಿಕೊಂಡರೆ ಹಬೆ ಹೊರಹೋಗಲು ದಾರಿಯಿರುವುದಿಲ್ಲ. ಇದರಿಂದ ಕುಕ್ಕರ್ ಒಳಗಿನ ಒತ್ತಡ ಹತೋಟಿ ಮೀರುತ್ತದೆ.
- ಹಳೆಯ ಗ್ಯಾಸ್ಕೆಟ್ (ರಬ್ಬರ್) ಬಳಕೆ: ಕುಕ್ಕರ್‌ನ ರಬ್ಬರ್ ಸಡಿಲವಾಗಿದ್ದರೆ ಅಥವಾ ಬಿರುಕು ಬಿಟ್ಟಿದ್ದರೆ ಹಬೆ ಲೀಕ್ ಆಗುತ್ತದೆ. ಇದರಿಂದ ಸರಿಯಾದ ಒತ್ತಡ ನಿರ್ಮಾಣವಾಗದೆ ಕುಕ್ಕರ್ ಮೇಲೆ ಒತ್ತಡ ಬೀಳುತ್ತದೆ.
- ಮಿತಿ ಮೀರಿದ ಆಹಾರ: ಕುಕ್ಕರ್‌ನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಆಹಾರ ಅಥವಾ ನೀರನ್ನು ತುಂಬಿಸಬಾರದು. ಆಹಾರ ಉಕ್ಕಿ ವಿಸ್ಲ್ ರಂಧ್ರವನ್ನು ಮುಚ್ಚಿದರೆ ಅಪಾಯ ಕಟ್ಟಿಟ್ಟ ಬುತ್ತಿ.
- ಗುಣಮಟ್ಟವಿಲ್ಲದ ಕುಕ್ಕರ್ ಬಳಕೆ: ಐಎಸ್‌ಐ (ISI) ಮುದ್ರೆ ಇಲ್ಲದ ಅಥವಾ ಕಳಪೆ ಲೋಹದ ಕುಕ್ಕರ್‌ಗಳು ಅತಿಯಾದ ಶಾಖವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವುದಿಲ್ಲ.

ಸುರಕ್ಷತೆಗಾಗಿ ಈ ಕ್ರಮಗಳನ್ನು ಪಾಲಿಸಿ:
- ಕುಕ್ಕರ್ ಮುಚ್ಚುವ ಮುನ್ನ ವಿಸ್ಲ್ ಬರುವ ಕೊಳವೆಯಲ್ಲಿ ಗಾಳಿ ಸರಾಗವಾಗಿ ಹೋಗುತ್ತಿದೆಯೇ ಎಂದು ಪರೀಕ್ಷಿಸಿ.
- ಸೇಫ್ಟಿ ವಾಲ್ವ್ ತುಕ್ಕು ಹಿಡಿದಿದ್ದರೆ ಅಥವಾ ಹಳೆಯದಾಗಿದ್ದರೆ ಕೂಡಲೇ ಬದಲಾಯಿಸಿ.
- ಕುಕ್ಕರ್‌ನಿಂದ ಹಬೆ ಪೂರ್ತಿ ಹೋದ ನಂತರವೇ ಮುಚ್ಚಳವನ್ನು ತೆಗೆಯಿರಿ. ಬಲವಂತವಾಗಿ ತೆಗೆಯಲು ಪ್ರಯತ್ನಿಸಬೇಡಿ.
- ಪ್ರತಿ 6 ತಿಂಗಳಿಗೊಮ್ಮೆ ಗ್ಯಾಸ್ಕೆಟ್ ಅಥವಾ ರಬ್ಬರ್ ಅನ್ನು ಬದಲಾಯಿಸುವುದು ಉತ್ತಮ.
- ಅಡುಗೆ ಮಾಡುವಾಗ ಕುಕ್ಕರ್‌ನಿಂದ ಅಸಹಜ ಶಬ್ದ ಕೇಳಿಬಂದರೆ ಅಥವಾ ಪಕ್ಕದಿಂದ ಹಬೆ ಜೋರಾಗಿ ಲೀಕ್ ಆಗುತ್ತಿದ್ದರೆ ತಕ್ಷಣ ಗ್ಯಾಸ್ ಆಫ್ ಮಾಡಿ.
ಅಡುಗೆ ಮನೆಯಲ್ಲಿ ಮಾಡುವ ಸಣ್ಣ ಮುನ್ನೆಚ್ಚರಿಕೆಗಳು ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ಗೃಹಿಣಿಯರು ಈ ವಿಚಾರದಲ್ಲಿ ಸದಾ ಜಾಗರೂಕರಾಗಿರುವುದು ಅವಶ್ಯಕ.
