ಬೆಂಗಳೂರು: ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿರುವ ಸಿಪಿ ಯೋಗೇಶ್ವರ್ ಅವರ ವಿರುದ್ದ ಕಿಡಿಕಾರಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಪಕ್ಷದ ಬದಲು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರೆ, ಎನ್‌ಡಿಎಗೆ ಅನುಕೂಲವಾಗುತ್ತಿತ್ತು.ಆದರೆ ಯೋಗೇಶ್ವರ್ ಪಕ್ಷಕ್ಕೆ ದ್ರೋಹವನ್ನು ಎಸಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಬಿಜೆಪಿ ಪಕ್ಷದ ಕಟ್ಟಾಳಾಗಿರಲಿಲ್ಲ. ಅವರು ಬೇರೆ ಬೇರೆ ಸಿದ್ದಾಂತಗಳಿಂದ, ಬೇರೆ ಬೇರೆ ಪಕ್ಷದಿಂದ ಬಂದವರಾಗಿದ್ದರು. ನಮ್ಮ ಪಕ್ಷದವರು ಕೂಡಾ ಅವರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿ, ಹೈಕಮಾಂಡ್ ಜೊತೆ ಸಿಪಿ ಯೋಗೇಶ್ವರ್ ಬಗ್ಗೆ ಚರ್ಚೆ ನಡೆಸಿದ್ದೆವು. ಆದರೆ ಅವರ ಯೋಜನೆ ಬೇರೆಯಾಗಿತ್ತು. ನಮ್ಮ ಮಾತುಗಳನ್ನು ಕೇಳದೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದವರೆಲ್ಲರೂ ಜೆಡಿಎಸ್ ಟಿಕೆಟ್ ಕುರಿತು ಕುಮಾರಸ್ವಾಮಿಯವರ ತೀರ್ಮಾನವೇ ಅಂತಿಮ ಎಂದು ಹೇಳಿದ್ದೇವು ಆದರೆ ಕುಮಾರಸ್ವಾಮಿಯವರು ನಮ್ಮ ಯೋಚನೆಗೂ ಮೀರಿ ಜೆಡಿಎಸ್ ಪಕ್ಷದ ಚಿಹ್ನೆಯ ಮೂಲಕ ಸ್ಪರ್ಧಿಸಿ ಎನ್ನುವ ಸುವರ್ಣಾವಕಾಶವನ್ನು ನೀಡಿದರು.ಯಾವ ಚಿನ್ಹೆ ಎನ್ನುವುದು ಮುಖ್ಯವಲ್ಲ ಎನ್‌ಡಿಎಯಿಂದ ಸ್ಪರ್ಧೆ ಮಾಡ್ತಿದ್ದರು ಅಷ್ಟೇ.ಯೋಗೇಶ್ವರ್ ನಮ್ಮ ಪಕ್ಷದಲ್ಲಿ ಲೀಡರ್ ಆಗಿದ್ದವರು ಹೋಗಿ ಕಾಂಗ್ರೆಸ್ ಪಕ್ಷದಲ್ಲಿ ಲಾಸ್ಟ್‌ಬೆಂಚ್ ಆಗ್ತಾರೆ. ಅವರನ್ನು ಬೆಳೆಯಲು ಬಿಡುವುದಿಲ್ಲ ಡಿಕೆಶಿವಕುಮಾರ್ ಅವರು.ಆಮಿಷಕ್ಕೊಳಗಾಗಿ ತಮ್ಮ ರಾಜಕೀಯ ಭವಿಷ್ಯವನ್ನು ತಮ್ಮ ಕೈಯಾರೆ ತಾವೇ ಹಾಳುಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿಯನ್ನ ನಡೆಸಿದ್ದಾರೆ.