ಕರ್ನಾಟಕ ರಾಜ್ಯ ಸರ್ಕಾರವು 2026-27ನೇ ಸಾಲಿನ ಬಜೆಟ್ ಮಾರ್ಚ್ 6, 2026 ರಂದು ಮಂಡಿಸಲು ಗಂಭೀರವಾಗಿ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸಿದರೆ, ಅದು ಅವರ ವೃತ್ತಿಜೀವನದ 17ನೇ ಬಜೆಟ್ ಆಗಲಿದೆ. ಈ ಮೂಲಕ ಅತಿ ಹೆಚ್ಚು ಬಾರಿ ರಾಜ್ಯ ಬಜೆಟ್ ಮಂಡಿಸಿದ ಹಣಕಾಸು ಸಚಿವ ಎನ್ನುವ ತಮ್ಮದೇ ದಾಖಲೆಯನ್ನು ಅವರು ಮತ್ತಷ್ಟು ಬಲಪಡಿಸಿಕೊಳ್ಳಲಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ಬಜೆಟ್ ಅಧಿವೇಶನವು ಈ ಕೆಳಗಿನಂತೆ ನಡೆಯುವ ಸಾಧ್ಯತೆಯಿದ್ದು,ಮಾರ್ಚ್ 5ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಈಗಾಗಲೇ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ.ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಹೊಸ ಯೋಜನೆಗಳ ಸೇರ್ಪಡೆ ಮತ್ತು ಅನುದಾನ ಹಂಚಿಕೆಯ ಕುರಿತು ಇಲಾಖಾವಾರು ಮಾಹಿತಿ ಕಲೆಹಾಕಲಾಗುತ್ತಿದೆ.

2026-27ನೇ ಸಾಲಿನ ಬಜೆಟ್ ಗಾತ್ರವು ಸುಮಾರು 4.5 ಲಕ್ಷ ಕೋಟಿ ರೂಪಾಯಿಗಳಿಂದ 4.7 ಲಕ್ಷ ಕೋಟಿ ರೂಪಾಯಿಗಳವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನದ ಜೊತೆಗೆ, ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ನಿರೀಕ್ಷೆಯಿದೆ.

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಮುಖ್ಯಮಂತ್ರಿಗಳು 17ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವುದು ರಾಜಕೀಯವಾಗಿಯೂ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *