ನವದೆಹಲಿ: ನಿರುದ್ಯೋಗ, ಸಾಲು ಸಾಲು ಪರೀಕ್ಷಾ ಹಗರಣಗಳ ವಿರುದ್ಧ ಸಿಡಿದೆದ್ದ ಯುವ ಸಮೂಹ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ದಿಢೀರ್ ನಿರ್ಬಂಧಿಸಲಾಗಿದೆ (Blocked). ಕೇವಲ ನಾಲ್ಕೇ ದಿನಗಳಲ್ಲಿ ಲಕ್ಷಾಂತರ ಯುವಕರನ್ನು ಸೆಳೆದು ದೇಶದ ಅತಿ ದೊಡ್ಡ ಆನ್‌ಲೈನ್ ಟ್ರೆಂಡ್ ಆಗಿದ್ದ ಈ ವಿಡಂಬನಾತ್ಮಕ ರಾಜಕೀಯ ಅಭಿಯಾನದ ಓಟಕ್ಕೆ ಸದ್ಯ ಎಕ್ಸ್‌ನಲ್ಲಿ ಬ್ರೇಕ್ ಬಿದ್ದಿದೆ.

    ಮೇ 16 ರಂದು ಆರಂಭವಾಗಿದ್ದ ಈ ಖಾತೆಯು ಕೇವಲ ನಾಲ್ಕು ದಿನಗಳಲ್ಲಿ ಎಕ್ಸ್‌ನಲ್ಲಿ ಬರೋಬ್ಬರಿ 2 ಲಕ್ಷ (200K) ಫಾಲೋವರ್ಸ್ ಗಳಿಸಿತ್ತು. ಆದರೆ, ಗುರುವಾರ (ಮೇ 21) ದಿಢೀರನೆ “ಕಾನೂನು ಬೇಡಿಕೆಯ ಮೇರೆಗೆ ಈ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ” (Withheld in India in response to a legal demand) ಎಂಬ ಸಂದೇಶದೊಂದಿಗೆ ಖಾತೆಯನ್ನು ನಿರ್ಬಂಧಿಸಲಾಗಿದೆ.

    ಸಂಸ್ಥಾಪಕ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ: ಎಕ್ಸ್ ಖಾತೆ ಬ್ಲಾಕ್ ಆಗಿರುವ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, “ನಾವು ನಿರೀಕ್ಷಿಸಿದಂತೆಯೇ ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಖಾತೆಯನ್ನು ತಡೆಹಿಡಿಯಲಾಗಿದೆ. ಕೇವಲ 4 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಬಂದಿದ್ದೇ ಇದಕ್ಕೆ ಕಾರಣ. ನಮ್ಮನ್ನು ಕಂಡು ಅವರು ಯಾಕೆ ಇಷ್ಟೊಂದು ಹೆದರುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಎಕ್ಸ್‌ನಲ್ಲಿ ಬ್ಲಾಕ್ ಆಗಿದ್ದರೂ, ಇನ್ಸ್ಟಾಗ್ರಾಮ್‌ನಲ್ಲಿ ಸಿಜೆಪಿ ಖಾತೆ ಸಕ್ರಿಯವಾಗಿದ್ದು, ಕೆಲವೇ ದಿನಗಳಲ್ಲಿ ಬರೋಬ್ಬರಿ 1.3 ಕೋಟಿ (13 Million) ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ದೇಶದ ದೊಡ್ಡ ಪಕ್ಷಗಳನ್ನೇ ಹಿಂದಿಕ್ಕಿದೆ.

    ಯಾರಿದು ಅಭಿಜಿತ್ ದಿಪ್ಕೆ? ಆಪ್‌ಗೂ ಇವರಿಗೂ ಏನು ಸಂಬಂಧ?

    ಕಾಕ್ರೋಚ್ ಜನತಾ ಪಾರ್ಟಿಯನ್ನು ಹುಟ್ಟುಹಾಕಿದ ವ್ಯಕ್ತಿಯೇ ಈ ಅಭಿಜಿತ್ ದಿಪ್ಕೆ. 30 ವರ್ಷದ ಇವರು ಮೂಲತಃ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಪುಣೆ) ದವರು. ಪುಣೆಯಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿರುವ ಇವರು, ಪ್ರಸ್ತುತ ಅಮೆರಿಕದ ಪ್ರತಿಷ್ಠಿತ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ (Boston University) ಪಬ್ಲಿಕ್ ರಿಲೇಶನ್ಸ್ (PR) ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

    ಅಭಿಜಿತ್ ದಿಪ್ಕೆ ಮೂಲತಃ ಓರ್ವ ರಾಜಕೀಯ ಸಂವಹನ ತಂತ್ರಜ್ಞ (Political communication strategist) ಆಗಿದ್ದು, ಡಿಜಿಟಲ್ ವೇದಿಕೆಗಳು ಹಾಗೂ ಮೀಮ್‌ಗಳ ಮೂಲಕ ರಾಜಕೀಯ ಅಭಿಪ್ರಾಯ ರೂಪಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ. ವಿಶೇಷವೆಂದರೆ, 2020 ರಿಂದ 2023 ರವರೆಗೆ ಇವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ (AAP) ಸೋಷಿಯಲ್ ಮೀಡಿಯಾ ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು.

    2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೀಮ್ ಆಧಾರಿತ ಡಿಜಿಟಲ್ ಕ್ಯಾಂಪೇನ್‌ಗಳ ಮೂಲಕ ಆಪ್‌ ಪರವಾಗಿ ಯುವಕರನ್ನು ತಲುಪುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಮನೀಷ್ ಸಿಸೋಡಿಯಾ ಅವರೊಂದಿಗೂ ಆಪ್ತ ಒಡನಾಟ ಹೊಂದಿದ್ದರು. ಹೀಗಾಗಿಯೇ ಕಾಕ್ರೋಚ್ ಪಾರ್ಟಿಯ ಹಿಂದೆ ಆಮ್ ಆದ್ಮಿ ಪಕ್ಷದ ಹಿಡನ್ ಅಜೆಂಡಾ ಇದೆ ಎಂಬ ಆರೋಪಗಳು ಎಕ್ಸ್‌ನಲ್ಲಿ ಕೇಳಿಬಂದಿವೆ. ಆದರೆ, “ಇದು ಸಂಪೂರ್ಣವಾಗಿ ವ್ಯಂಗ್ಯಾತ್ಮಕ ಆಂದೋಲನವೇ ಹೊರತು ಯಾವುದೇ ರಾಜಕೀಯ ಪಕ್ಷದ ಬೆಂಬಲಿತವಲ್ಲ” ಎಂದು ಅಭಿಜಿತ್ ಸ್ಪಷ್ಟಪಡಿಸಿದ್ದಾರೆ.

    ಸಿಜೆಪಿ ಹುಟ್ಟಿಕೊಂಡಿದ್ದು ಯಾಕೆ?

    ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು “ಜಿರಳೆಗಳು (ಕಾಕ್ರೋಚ್) ಮತ್ತು ಸಮಾಜದ ಪರಾವಲಂಬಿಗಳು” ಎಂದು ಕರೆದಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ (ನಂತರ ಅವರು ಈ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದರು) ಯುವಕರ ಆಕ್ರೋಶದ ಸಂಕೇತವಾಗಿ ಮೇ 16 ರಂದು ಈ ಪಕ್ಷ ಹುಟ್ಟಿಕೊಂಡಿತು. ದೇಶದ ನಿರುದ್ಯೋಗ ಮತ್ತು ವ್ಯವಸ್ಥೆಯ ಕುರಿತ ಯುವಕರ ಹತಾಶೆಯನ್ನು ವ್ಯಂಗ್ಯದ ಮೂಲಕ ಪ್ರಶ್ನಿಸಲು ಈ ವೇದಿಕೆಯನ್ನು ಬಳಸಲಾಗುತ್ತಿದೆ.

    • ಡಿಜಿಟಲ್ ಸೆನ್ಸಾರ್‌ಶಿಪ್ ಚರ್ಚೆ: ಕೇವಲ ವಿಡಂಬನೆ (Satire) ಮತ್ತು ಮೀಮ್‌ಗಳಿಗಾಗಿ ಆರಂಭವಾದ ಖಾತೆಯೊಂದು ಕೆಲವೇ ದಿನಗಳಲ್ಲಿ ಕೋಟ್ಯಂತರ ಜನರನ್ನು ತಲುಪಿದ್ದು ಹಾಗೂ ಅದನ್ನು ಅಷ್ಟೇ ವೇಗವಾಗಿ ಕಾನೂನಾತ್ಮಕವಾಗಿ ಬ್ಲಾಕ್ ಮಾಡಿರುವುದು ಭಾರತದಲ್ಲಿ ‘ಡಿಜಿಟಲ್ ವಾಕ್-ಸ್ವಾತಂತ್ರ್ಯ’ ಮತ್ತು ರಾಜಕೀಯ ಅಸಹಿಷ್ಣುತೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
    • ಯುವಪೀಳಿಗೆಯ ಬದಲಾದ ಟ್ರೆಂಡ್: ಎಕ್ಸ್‌ನಲ್ಲಿ ಖಾತೆ ಬ್ಯಾನ್ ಆದರೂ ಇನ್ಸ್ಟಾಗ್ರಾಮ್‌ನಲ್ಲಿ 1.3 ಕೋಟಿ ಯುವಕರು ಈ ಪೇಜ್‌ ಅನ್ನು ಫಾಲೋ ಮಾಡುತ್ತಿರುವುದು, ಭಾಷಣಗಳಿಗಿಂತಲೂ ಮೀಮ್‌ಗಳು ಮತ್ತು ಸ್ಯಾಟೈರ್‌ಗಳು ಇಂದಿನ ದಿನಗಳಲ್ಲಿ ಯುವ ಸಮೂಹಕ್ಕೆ ಎಷ್ಟು ವೇಗವಾಗಿ ಕನೆಕ್ಟ್ ಆಗುತ್ತವೆ ಎಂಬುದನ್ನು ಸಾಬೀತುಪಡಿಸಿದೆ.

    Leave a Reply

    Your email address will not be published. Required fields are marked *