ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದು, ಬೆಳ್ಳಿತೆರೆಯ ಮೇಲೂ ಅವರು ‘ಮುಖ್ಯಮಂತ್ರಿ’ಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ‘ಆರ್. ಎ. ಫಿಲ್ಮ್ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಶ್ ಗೌಡ ಅವರು ಈ ವಿಶೇಷ ಸಾಹಸಕ್ಕೆ ಕೈಹಾಕಿದ್ದು, ಕೇವಲ 48 ಗಂಟೆಗಳಲ್ಲಿ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆ ಬರೆಯುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಮುಖ್ಯಮಂತ್ರಿ’ ಎಂದು ಹೆಸರಿಡಲಾಗಿದ್ದು, ನಿರ್ದೇಶಕರು ವಿವರಿಸಿದ ಕಥಾಹಂದರ ಇಷ್ಟವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಆರಂಭದಲ್ಲಿ ಬಣ್ಣ ಹಚ್ಚಲು ಹಿಂದೇಟು ಹಾಕಿದ್ದ ಅವರನ್ನು, ಆಪ್ತ ಹಾಗೂ ಮಾಜಿ ಸಚಿವ ಎಚ್. ಎಂ. ರೇವಣ್ಣ ಅವರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದ ಸಿದ್ದರಾಮಯ್ಯನವರು, 2017ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ‘ಸಮ್ಮರ್ ಹಾಲಿಡೇಸ್’ ಎಂಬ ಮಕ್ಕಳ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕಥೆಯ ಕೇಂದ್ರ ಬಿಂದುವಾಗಿ ಪೂರ್ಣ ಪ್ರಮಾಣದಲ್ಲಿ ಕ್ಯಾಮೆರಾ ಎದುರಿಸುತ್ತಿರುವುದು ಇದೇ ಮೊದಲು.

ಇದೊಂದು ಅತ್ಯಂತ ವಿಶಿಷ್ಟವಾದ ‘ಸ್ಕ್ರಿಪ್ಟ್ ಟು ಸ್ಕ್ರೀನ್’ ಯೋಜನೆಯಾಗಿದ್ದು, ಕೇವಲ 48 ಗಂಟೆಗಳ ಅಂತರದಲ್ಲಿ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮತ್ತು ಸೆನ್ಸಾರ್ ಕ್ಲಿಯರೆನ್ಸ್ ಮುಗಿಸಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಿಸುವ ಬೃಹತ್ ಸವಾಲನ್ನು ಚಿತ್ರತಂಡ ಸ್ವೀಕರಿಸಿದೆ. ಈ ಸಿನಿಮಾದಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ, ಸಮಕಾಲೀನ ರಾಜಕೀಯದ ಹಲವು ಪ್ರಮುಖ ನಾಯಕರನ್ನು ಒಂದೇ ತೆರೆಯ ಮೇಲೆ ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್. ಎಂ. ರೇವಣ್ಣ ಹಾಗೂ ನಟಿ, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಹಲವು ರಾಜಕೀಯ ಗಣ್ಯರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಸಂಪರ್ಕಿಸಲಾಗಿದೆ. ಈ ಎಲ್ಲಾ ನಾಯಕರು ಒಪ್ಪಿಗೆ ನೀಡಿದರೆ, ಕನ್ನಡ ಚಿತ್ರರಂಗದಲ್ಲಿ ಇದೊಂದು ಐತಿಹಾಸಿಕ ಮತ್ತು ಕುತೂಹಲಕಾರಿ ಸಿನಿಮಾವಾಗಿ ಹೊರಹೊಮ್ಮಲಿದೆ.

Leave a Reply

Your email address will not be published. Required fields are marked *