ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ʼಕುರ್ಚಿಯ ಮೇಲೆ ಟವೆಲ್ ಹಾಕುವುದುʼ ಎಂದರೆ ಅದು ಅಧಿಕಾರವನ್ನು ಕಾಯ್ದಿರಿಸುವ ಅಥವಾ ಪಡೆಯುವ ಸಂಕೇತ ಎಂಬ ಮಾತು ಚಾಲ್ತಿಯಲ್ಲಿದೆ. ಈ ಹಿಂದೆ ಸಿದ್ದರಾಮಯ್ಯನವರೇ ಪತ್ರಿಕಾಗೋಷ್ಠಿಯಲ್ಲಿ ʼಬಹಳ ಜನ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕ್ತಾರೆʼಎಂದು ಡಿಕೆಶಿಯವರನ್ನು ನೋಡಿ ಹಾಸ್ಯ ಮಾಡಿದ್ದರು. ಈಗ ಸ್ವತಃ ಸಿಎಂ ಅವರೇ ಡಿಕೆಶಿಯವರ ತಲೆಗೆ ಟವೆಲ್ ಕಟ್ಟಿರುವುದು, ಒಂದು ವೇಳೆ ‘ಅಧಿಕಾರ ಹಸ್ತಾಂತರ’ಕ್ಕೆ ಸಮ್ಮತಿ ಸೂಚಿಸುತ್ತಿದ್ದಾರೆಯೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ, ಸರ್ಕಾರ ಶೀಘ್ರವೇ ಬೀಳಲಿದೆ ಎಂದು ಪದೇ ಪದೇ ಟೀಕಿಸುತ್ತಿರುತ್ತವೆ. ಇಂತಹ ಸಮಯದಲ್ಲಿ ಇಬ್ಬರು ನಾಯಕರು ಒಟ್ಟಾಗಿ ಕಾಣಿಸಿಕೊಳ್ಳುವುದು ಮತ್ತು ಪರಸ್ಪರ ಆತ್ಮೀಯತೆ ತೋರುವುದು ʼನಾವಿಬ್ಬರೂ ಒಂದೇʼಎಂಬ ಸಂದೇಶವನ್ನು ಹೈಕಮಾಂಡ್ ಮತ್ತು ವಿರೋಧ ಪಕ್ಷಗಳಿಗೆ ರವಾನಿಸುವ ತಂತ್ರವೂ ಆಗಿರಬಹುದು.
ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದು ಅರ್ಧ ಅವಧಿ ಪೂರೈಸುತ್ತಿರುವ ಈ ಹಂತದಲ್ಲಿ, 2.5 ವರ್ಷಗಳ ನಂತರ ಅಧಿಕಾರ ಬದಲಾವಣೆಯಾಗಲಿದೆ ಎಂಬ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಘಟನೆಯು ಡಿಕೆಶಿ ಬೆಂಬಲಿಗರಲ್ಲಿ ಹೊಸ ಭರವಸೆ ಮೂಡಿಸಿದ್ದರೆ, ಸಿದ್ದರಾಮಯ್ಯನವರ ಬೆಂಬಲಿಗರು ಇದನ್ನು ಕೇವಲ ಸೌಜನ್ಯದ ನಡವಳಿಕೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ರಾಜಕೀಯದಲ್ಲಿ ಪ್ರತಿಯೊಂದು ಸಣ್ಣ ನಡೆಯೂ ಒಂದು ದೊಡ್ಡ ಸಂದೇಶವನ್ನು ಸಾರುವಂತಿರುತ್ತದೆ.ಒಂದು ವೇಳೆ ಇದು ಪ್ರೀತಿಯ ನಡವಳಿಕೆಯಾಗಿದ್ದರೆ, ಸರ್ಕಾರದ ಸುಗಮ ಆಡಳಿತಕ್ಕೆ ಇದು ಪೂರಕವಾಗಿರುತ್ತದೆ.ಇದು ಸಾಂಕೇತಿಕ ಅಧಿಕಾರ ಹಸ್ತಾಂತರವಾಗಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದ ಎಂಬುದನ್ನು ಕಾದುನೋಡಬೇಕಿದೆ.
