ನವದೆಹಲಿ:ರಾಷ್ಟ್ರಪತಿ ಭವನದಲ್ಲಿ ನಡೆದ ಗಣರಾಜ್ಯೋತ್ಸವದ ನಂತರದ ‘ಅಟ್-ಹೋಮ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಅಸ್ಸಾಂನ ಸಾಂಪ್ರದಾಯಿಕ ಗಮೋಸಾ‘ (Gamosa) ಧರಿಸದ ವಿಚಾರ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಸೇರಿದಂತೆ ಬಹುತೇಕ ಗಣ್ಯರು ಈಶಾನ್ಯ ಭಾರತದ ಸಾಂಪ್ರದಾಯಿಕ ‘ಪಟ್ಕಾ’ ಅಥವಾ ‘ಗಮೋಸಾ’ ಧರಿಸಿದ್ದರು. ಆದರೆ ರಾಹುಲ್ ಗಾಂಧಿ ಅವರು ಇದನ್ನು ಧರಿಸಲು ನಿರಾಕರಿಸಿದರು ಎಂಬುದು ಬಿಜೆಪಿಯ ಆರೋಪವಾಗಿದೆ.

ಗಮೋಸಾ ಅಸ್ಸಾಂ ಮತ್ತು ಈಶಾನ್ಯ ಭಾರತದ ಅಸ್ಮಿತೆಯ ಸಂಕೇತ. ಇದನ್ನು ಧರಿಸದಿರುವುದು ಆ ಭಾಗದ ಜನರಿಗೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಬಿಜೆಪಿ ಕಿಡಿಕಾರಿದೆ.ಸ್ವತಃ ರಾಷ್ಟ್ರಪತಿಗಳು ಎರಡು ಬಾರಿ ಕೇಳಿಕೊಂಡರೂ ರಾಹುಲ್ ಧರಿಸಲಿಲ್ಲ ಎಂಬ ವದಂತಿಯನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಕಾರ್ಯಕ್ರಮದಲ್ಲಿ ಗಮೋಸಾ ಧರಿಸದ ಫೋಟೋವನ್ನು ಹಂಚಿಕೊಂಡು, “ಹಾಗಾದರೆ ರಾಜನಾಥ್ ಸಿಂಗ್ ಅವರೂ ಈಶಾನ್ಯವನ್ನು ಅವಮಾನಿಸಿದರೇ?” ಎಂದು ಮರುಪ್ರಶ್ನೆ ಹಾಕಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ನೀಡುವ ಮೂಲಕ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ವಿವಾದದಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂತಹ “ಗಮೋಸಾ” ವಿವಾದ ಸೃಷ್ಟಿಸುತ್ತಿದೆ ಎಂಬುದು ಕಾಂಗ್ರೆಸ್ ವಾದ.

Leave a Reply

Your email address will not be published. Required fields are marked *