ಭ್ರಮೆಯಲ್ಲಿ ಸಿಲುಕಿರುವ ಸಮಾಜಕ್ಕೆ ಸೂಕ್ತ ಚಿಕಿತ್ಸೆ ಬೇಕಾಗಿದೆ. ತನ್ನ ಕಾಲಬುಡದಲ್ಲಿಯೇ ತಣ್ಣಗೆ ಹರಿಯುತ್ತಿರುವ ಹೆಬ್ಬಾವಿನಂತಹ ಸನ್ನಿವೇಶವನ್ನು ಕಂಡರೂ ಸಹ ನಿರ್ಭಾವುಕರಾಗಿ ನಿರುತ್ಸಾಹಿಗಳಾಗಿ, ಯಾವುದೇ ಪ್ರತಿಕ್ರಿಯೆ ನೀಡದೇ, ಭ್ರಮಾಲೋಕದ ತತ್ಕಾಲದ ನೊರೆಯ ಆಕರ್ಷಣೆಗೆ ಒಳಗಾಗಿ ಕಾಲ ಕಳೆಯುತ್ತಿದ್ದಾರೆ. ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸುಲಭವಾಗಿ ಹೆಬ್ಬಾವಿನ ತೆಕ್ಕೆಗೆ ಒಪ್ಪಿಸಿ ನಿರ್ವೀರ್ಯರಾಗಿ ಬದುಕುತ್ತಿದ್ದಾರೆ. ಇದನ್ನು ಅಂದರೆ ಈ ವಾತಾವರಣದಲ್ಲಿ ಬದುಕುತ್ತಿರುವ ಹಾಗೂ ಇದೇ ಸತ್ಯ ಎಂದು ಢಾಣಾಢಂಗೂರ ಹೊಡೆದು ಮತ್ತಷ್ಟು ಅಮಾಯಕರ ಜೀವನವನ್ನು ಬಲಿ ಕೊಡುತ್ತಿರುವವರನ್ನು ಏನೆಂದು ಕರೆಯಬಹುದು. ಹಾವು ಹರಿದವರೆಲ್ಲಾ ಪರಶಿವನಾಗಲು ಸಾಧ್ಯವೇ ಅಥವಾ ಹರಿದಾಡುವ ಹಾವುಗಳೆಲ್ಲಾ ಕಂಠಾಭರಣವಾಗಬಲ್ಲವೇ!?.
ದೇಶವೆಂದರೆ ಏನು ಎಂಬ ಮಾತಿಗೆ ಅಥವಾ ಪರಿಕಲ್ಪನೆಗೆ ಸೂಕ್ತ ಅರ್ಥವಿವರಣೆ ಕೊಡುವವರಾರು!? ಅದನ್ನು ಅರ್ಥ ಮಾಡಿಸಲು ಸಾಧ್ಯವೇ? ಬಹುಶಃ ದೇಶವೆಂದರೆ ಏಕವ್ಯಕ್ತಿ ಪೂಜೆಯೆಂಬ ಭಕ್ತಿಪಂಥವೇನಾದರೂ ಸೃಷ್ಟಿಯಾಗಿದೆಯೇ? ಈ ಹಿಂದೆ ಈ ದೇಶದಲ್ಲಿ ಹಲವಾರು ಪಂಥಗಳು ಪಂಗಡಗಳು ಆಗಿಹೋಗಿವೆ. ಕೆಲವು ಇನ್ನೂ ಅಲ್ಲಲ್ಲಿ ತಮ್ಮ ಇರುವಿಕೆಯನ್ನು ಕೆಲವರ ಮೂಲಕ ಆಗಾಗ ಪ್ರಕಟಪಡಿಸುತ್ತವೆ. ಇನ್ನು ಕೆಲವು ಗ್ರಂಥಗಳಲ್ಲಿ ಮತ್ತು ಜನರ ಸ್ಮೃತಿಯಲ್ಲಿ ಮಾತ್ರ ಉಳಿದಿವೆ, ಹಾಗಾದರೆ ಈಗ ಎದ್ದಿರುವ ಈ ಭಕ್ತಿಪಂಥದ ಅಲೆ ಏನಾಗಬಹುದು? ಈ ಹಿಂದೆ ಸೃಜನೆಯಾದ ಪಂಥಗಳು ದೇಶದ ಏಳ್ಗೆಗೆ ಮತ್ತು ಸಮಾಜದ ಐಕ್ಯತೆಗೆ ಕೊಡುಗೆ ಕೊಟ್ಟರೆ, ಈಗಿನ ಅಲೆ ಏನು ಕೊಡುಗೆ ನೀಡಬಹುದು. ಹತ್ತು ವರ್ಷಗಳ ನಂತರ ಈ ಬಗ್ಗೆ ಯೋಚಿಸಿದಾಗ ಸಿಗಬಹುದಾದ ಉತ್ತರವಾದರೂ ಏನು!?
ಸಮಾಜವೆಂಬುದು ಹರಿದೋಡುವ ನೀರಿನ‌ ಹಾಗೆ. ನೀರಿಗೆ ಯಾವುದೇ ಭೇದವಿಲ್ಲ; ತಾನು ಹುಟ್ಟುವ ಸ್ಥಳವು ಪವಿತ್ರವಾದರೂ ಒಮ್ಮೆ ಹುಟ್ಟಿ ಪಯಣ ಆರಂಭವಾದರೆ ಸೇರುವ ಗಮ್ಯವೂ ಕೂಡಾ ಅಸಹ್ಯವಾಗಿಯೇ ಇರುತ್ತದೆ. ಅಂತೆಯೇ ಸಮಾಜವೂ ಸಹ ಮಾನವನ ಹುಟ್ಟನ್ನು ಸಂಭ್ರಮಿಸುತ್ತದೆ, ಆತನ ಏಳ್ಗೆಯನ್ನು ಸರಿಯಾದ ದಿಕ್ಕಿನೆಡೆ ನಡೆಯಲೆಂದೇ ಬಯಸುತ್ತದೆ, ಸಮಾಜಕ್ಕೆ ಪ್ರೇರಕವಾಗಲೆಂದೇ ಹಾರೈಸುತ್ತದೆ. ಆದರೆ ನದಿಯ ಓಟಕ್ಕೆ ತಡೆಯೊಡ್ಡುವಂತೆ ಕೆಲವು ವಂದಿ ಮಾಗಧರ ಪಡೆ ಧುತ್ತನೇ ಸೃಷ್ಟಿಯಾಗಿ ಸಮಾಜದ ದಿಕ್ಕನ್ನೇ ಬದಲಿಸಿ, ಅದರ ಗುರಿ ಕನಸು ಎಲ್ಲವನ್ನೂ ಮಡಚಿ ತನ್ನ ಕಂಕುಳಲ್ಲಿಟ್ಟುಕೊಂಡು ತನಗೆ ಬೇಕಾದ ಹಾಗೆ ಆಡಿಸುವ ಚಟಕ್ಕೆ ಬಿದ್ದು, ಅದೇ ಚಾಳಿಯಾಗಿ ಕಟ್ಟಕಡೆಗೆ ಸಮಾಜದ ಸೌಹಾರ್ದಯುತ ಸೌಧವನ್ನು ಕಗ್ಗತ್ತಲ ಕಂದರಕ್ಕೆ ತಳ್ಳುತ್ತದೆ. ಕಂದರದ ಹಾದಿಯತ್ತ ಧಾಪುಗಾಲು ಹಾಕುತ್ತಿರುವ ಅಥವಾ ಅದನ್ನು ಅಪ್ರಯತ್ನಪೂರ್ವಕವಾಗಿ ಮಾಡುತ್ತಿರುವ ವ್ಯವಸ್ಥೆಯನ್ನು ಸರಿದಾರಿಗೆ ತರುವವರು ಯಾರು!? ವಿಶ್ವವಿದ್ಯಾಲಯಗಳಿವೆ, ಸಂಶೋಧಕರಿದ್ದಾರೆ. ರಾಜಕೀಯ ಶಾಸ್ತ್ರವನ್ನು ಓದಿ ಕರತಲಾಮಲಕ ಮಾಡಿಕೊಂಡವರಿದ್ದಾರೆ, ಬುದ್ದಿಜೀವಿಗಳಂತೂ ಲೆಕ್ಕವಿಲ್ಲದಷ್ಟು ಇದ್ದಾರೆ ಹಾಗಾದರೆ ಹಾಳಾದ ಯುವಸಮೂಹವನ್ನು ಸಮಾಜದ ಸ್ವಾಸ್ಥ್ಯವನ್ನು ನೋಡಿಯೂ ಸುಮ್ಮನಿದ್ದಾರೆಯೇ?

ಕೆರೆಯಲ್ಲಿ ಜೀವಿಸುವ ಜೀವಿಗಳು ಅಸಂಖ್ಯ ಆದರೆ ಯಾವ ಜೀವಿಯನ್ನೂ ಸಹ ಇತರೆ ಪಂಗಡದ ಜೀವಿ ಅಸಹಿಷ್ಣುತೆಯಿಂದ ನೋಡಲಿಲ್ಲ ಸಹಬಾಳ್ವೆ ಎಂಬ ಪರಿಕಲ್ಪನೆಗೆ ಅತ್ಯಂತ ಉತ್ತಮ ಉದಾಹರಣೆ. ನಾವು ಶಾಲಾ ದಿನಗಳಲ್ಲಿ ಬೇಸಿಗೆಯ ರಜೆ ಬಂತೆಂದರೆ ಸೊಳ್ಳೆ ಪರದೆ ಮತ್ತು ಒಂದು ಚೀಲವನ್ನು ತೆಗೆದುಕೊಂಡು ಹಿರಿಯರ ಜೊತೆ ಹಳ್ಳ ಕೆರೆ ಕಟ್ಟೆಗಳಲ್ಲಿ ಮೀನು‌ ಹಿಡಿಯಲು ಹೋಗುತ್ತಿದ್ದೆವು. ಹಿರಿಯರು ನನ್ನಂತಹ ಚಿಕ್ಕ ಹುಡುಗರನ್ನು ತೀರದಲ್ಲಿ ಅಂದರೆ ನೀರು ಇರುವ ಜಾಗದಿಂದ ಸ್ವಲ್ಯ ದೂರದಲ್ಲಿ ಕುಳ್ಳರಿಸಿ ಅವರು ಸೊಳ್ಳೆ ಪರದೆಯನ್ನು ಹಿಡಿದುಕೊಂಡು ನೀರಿಗೆ ಇಳಿಯುತ್ತಿದ್ದರು. ಸೊಳ್ಳೆ ಪರದೆಯ ಆಕಡೆ ತುದಿಯನ್ನು ಒಬ್ಬರು ಈ ಕಡೆ ತುದಿಯನ್ನು ಒಬ್ಬರು ಹಿಡಿದುಕೊಂಡು ಎಡಕ್ಕೂ ಬಲಕ್ಕೂ ವಾಲಿಕೊಂಡು ಮಂಡಿಯನ್ನು ಬಗ್ಗಿಸಿ ಒಂದು ಕೈ ನೀರಿನ ಒಳಗೆ ಮತ್ತೊಂದು ಕೈ ಅದಕ್ಕೆ ಸಮಾನಾಂತರವಾಗಿ ಮೇಲಕ್ಕೆ ಹಿಡಿದುಕೊಂಡು ಒಂದು ನಿರ್ದಿಷ್ಟ ದಿಕ್ಕಿನಿಂದ ಅದರ ಅಭಿಮುಖ ಧಿಕ್ಕಿನೆಡೆ ಎಳೆದುಕೊಂಡು ಬರುತ್ತಿದ್ದರೆ ಸರಿಯಾಗಿ ಸೊಳ್ಳೆ ಪರದೆಯ ಮಧ್ಯಭಾಗಕ್ಕೆ ಒಬ್ಬನು ಬಗ್ಗಿ ಆ ಸೊಳ್ಳೆ ಪರದೆ ನೀರಿನ ತಳಮಟ್ಟದಿಂದ ಮೇಲೇಳದಂತೆ ಜಾಗ್ರತೆ ವಹಿಸುತ್ತಾ, ಆ ಇಬ್ಬರು ಮುಂದೆ ಬಂದತೆಲ್ಲಾ ಇವನು ಹಿಂದೆ ಹಿಂದೆ ನಡೆಯುತ್ತಿದ್ದ. ಕಡೆಯದಾಗಿ ಅವರ ಅಂದಾಜಿನ ಗಮ್ಯವನ್ನು ಮುಟ್ಡಿದ ಕೂಡಲೇ ಒಂದೇ ಸಲ ಮೂರೂ ಜನ ಮಾತನಾಡಿಕೊಂಡು ಉಸಿರು ಬಿಗಿ ಹಿಡಿದು “ಹುಪ್ ಐಸಾ” ಎಂದು ಸೊಳ್ಳೆ ಪರದೆಯನ್ನು ಮೇಲೆತ್ತುತ್ತಿದ್ದರು ಮತ್ತು ಹಾಗೆಯೇ ಅದನ್ನು ದಡಕ್ಕೆ ತಂದು ಹುಲ್ಲು ಹಸಲೆಯ ಮೇಲೆ ಚೆಲ್ಲುತ್ತಿದ್ದರು ಈ ನಡುವೆ ಸೊಳ್ಳೆ ಪರದೆಯಲ್ಲಿದ್ದಂತಹ ನೀರು ಸೊರ್ರರ್ ಎಂದು ಖಾಲಿಯಾಗುತ್ತಿತ್ತು. ಮಾಮೂಲಿ ಮೀನಿನ‌ ಬಲೆಗಳಿಗಿದ್ದಂತೆ ಸೊಳ್ಳೆ ಪರದೆಗಳಿಗೆ ದೊಡ್ಡ ದೊಡ್ಡ ಕಣ್ಣುಗಳಿರುವುದಿಲ್ಲ ಹಾಗಾಗಿ ನೀರು ಸರಾಗವಾಗಿ ಆಚೆ ಹೋಗುವುದಿಲ್ಲ ಮತ್ತು ಸಣ್ಣ ಸಣ್ಣ ಮರಿಗಳೂ ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗೆ ದಡಕ್ಕೆ ತಂದು‌ ಸುರಿದ ರಾಶಿಯಲ್ಲಿ ಮೀನಿನ ಜೊತೆಗೆ ಕೆರೆ ಹಾವುಗಳು, ಕಪ್ಪೆಗಳು, ಕಪ್ಪೆ ಮರಿಗಳು, ಮಿಳ್ಳೆಗೊರ್ಜಗಳು, ಏಡಿಗಳು ಹೀಗೆ ಸಕಲ ಜಲಚರಗಳೂ ಸಹ ಇರುತ್ತಿದ್ದವು. ಮೀನುಗಳನ್ನು ಬಿಟ್ಟು ಉಳಿದವುಗಳಿಗೆ ಕಾಲುಗಳಿದ್ದ ಕಾರಣ ಅವುಗಳು ಮತ್ತೆ ನೀರಿನ ಮನೆ ಸೇರಿಕೊಳ್ಳುತ್ತಿದ್ದವು. ಆದರೆ ಮೀನುಗಳು ಮಾತ್ರ ಎಗರಿ ಎಗರಿ ಎಗರಾಡಿ ಅಲ್ಲಿಯೇ ಸಾಯುತ್ತಿದ್ದವು.

ಬಹುಶಃ ಈ ಸಮಾಜದ ಬಾಯಿಲ್ಲದವರನ್ನು ಬಲವಿಲ್ಲದವರನ್ನೂ ದಮನಿತರನ್ನೂ ಮತ್ತಷ್ಟು ಹೀನಾಯ ಸ್ಥಿತಿಗೆ ತಳ್ಳಲು ಸೊಳ್ಳೆಪರದೆಯನ್ನು ಬೀಸಿದ್ದಾರೆಯೇ!? ಜನರ ಬಾಯಿಗೆ ಬೀಗ ಜಡಿಯಲಾಗಿದೆ. ಚಳವಳಿಗಳು ತಮ್ಮ ಖದರ್ ಕಳೆದುಕೊಂಡಿವೆ ಸಾಮಾಜಿಕ ನ್ಯಾಯ ಎಂಬ ಭಾವನೆ ವೈಯಕ್ತಿಕ ಹಿತಾಸಕ್ತಿಯಾಗಿ ಮಾರ್ಪಾಡಾಗಿದೆ. ಸಮಾಜದ ಬಗ್ಗೆ ಚಿಂತನೆ ಮಾಡುವುದೆಲ್ಲಾ ವ್ಯಾಪಾರ ಮನೋಭಾವದ ಮತ್ತೊಂದು ಮುಖವಾಗಿದೆ. ಸಮಾಜಸೇವೆ ಎಂಬ ಬೂಟಾಟಿಕೆಯ ಭಂಡತನವು ಸರ್ವವ್ಯಾಪಿಯಾಗಿದೆ. ಹಣವೇ ಪ್ರಧಾನವಾಗಿ ಜಗತ್ತನ್ನು ಆಳಲ್ಪಡುತ್ತಿದೆ. ಎಲ್ಲಾ ಜಾತಿಗಳನ್ನೂ ಈಗ ಹಣವೆಂಬ ಹೊಸಾ ಜಾತಿಯೊಂದು ಆಳುತ್ತಿದೆ.
ಕೆರೆಯ ಜೀವಿಗಳಂತಹ ಸಹಬಾಳ್ವೆಯ ಬದುಕು ಸಾಧ್ಯವಿಲ್ಲವೇ? ಅಥವಾ ಮೀನುಗಳಂತೆ ಅಸಹಾಯಕ ಸ್ಥಿತಿಯಲ್ಲಿ ಎಗರಿ ಎಗರಿ ಎಗರಾಡಿ ಸಾಯುವುದೊಂದೇ ಉಳಿದಿರುವ ದಾರಿಯೇ. ಭ್ರಮಾಲೋಕದ ಹೊರಗೆ ಬಂದು ಹೆಬ್ಬಾವಿನ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲವೇ ಎತ್ತ ಸಾಗುತಿದೆ ಜನರ ಜೀವನ. ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಯಂತ್ರಗಳಂತೆ ಬೆಳಿಗ್ಗೆ ಐದಕ್ಕೆ ಚಾಲೂ ಆದರೆ ರಾತ್ರಿ ಹತ್ತಕ್ಕೆ ನಿತ್ರಾಣವಾಗಿ ಹಾಸಿಗೆಯ ಮೇಲೆ ಧೊಪ್ಪನೆ ಬಿದ್ದು ನಿರ್ವೀರ್ಯವಾಗುವ ಈ ಜಗತ್ತು ಯಾವುದರ ಪ್ರತೀಕ.‌ ಪ್ರಶ್ನೆ ಮಾಡುವ ಮನಸ್ಥಿತಿಯನ್ನು ಬೆಳೆಸದ ಶಿಕ್ಷಣ ಪ್ರಶ್ನೆಗೆ ಉತ್ತರ ನೀಡದ ವ್ಯವಸ್ಥೆ ಯಾವುದರ ಪ್ರತಿಫಲ. ಈಗ ಬೆಳೆಯುತ್ತಿರುವ ಈ ನಿರ್ಭಾವುಕ ಸಮಾಜವು ಮುಂದಿನ ನಿಲ್ದಾಣ ತಲುಪಿದಾಗ ಯಾವ ಸಂದೇಶ ಕೊಡಬಲ್ಲದು. ಯಾವ ಸಿದ್ಧಾಂತಗಳನ್ನು ಮತ್ತು ನೀತಿಗಳನ್ನು ದಾಟಿಸಬಲ್ಲದು. ನಿಜವಾಗಿಯೂ ಈ ಭ್ರಮಾಲೋಕದ ಪರದೆಯನ್ನು ಕಿತ್ತೆಸೆದು ಸತ್ಯವನ್ನು ಕಾಣುವ ತವಕ ಮತ್ತು ಬಲ ಈ ಸಮಾಜಕ್ಕೆ ಇದೆಯೇ?
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
984 467 3976

Leave a Reply

Your email address will not be published. Required fields are marked *