ಮುಂಬೈ: ಹಬ್ಬ, ಜಾತ್ರೆ, ರಾಜಕೀಯ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ನೆಪದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸುವುದು ಹಾಗೂ ಕರ್ಕಶ ಶಬ್ದ ಮಾಡುವ ಡಿಜೆ (DJ) ಬಳಸುವುದಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ಮಹತ್ವದ ಹಾಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸುವಂತಿಲ್ಲ ಮತ್ತು ಸೌಂಡ್ ಸಿಸ್ಟಮ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘಿಸಿದರೆ ತಕ್ಷಣವೇ ಉಪಕರಣಗಳನ್ನು ಜಪ್ತಿ ಮಾಡುವಂತೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದೆ.
ಸಾರ್ವಜನಿಕರ ನೆಮ್ಮದಿ ಮುಖ್ಯ ಶಬ್ದ ಮಾಲಿನ್ಯ ಮತ್ತು ಸಾರ್ವಜನಿಕರ ಓಡಾಟಕ್ಕೆ ಆಗುವ ಅಡೆತಡೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಉಚ್ಚ ನ್ಯಾಯಾಲಯ, ರಸ್ತೆಗಳು ಇರುವುದು ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ವಿನಃ ಪಟಾಕಿ ಸಿಡಿಸಲು ಅಥವಾ ಡಿಜೆ ಹಾಕಿ ಕುಣಿಯಲು ಅಲ್ಲ ಎಂದು ಕಟುವಾಗಿ ನುಡಿದಿದೆ. ಕರ್ಕಶ ಶಬ್ದದಿಂದಾಗಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ, ವಯೋವೃದ್ಧರಿಗೆ, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ತೀವ್ರ ಸ್ವರೂಪದ ತೊಂದರೆಯಾಗುತ್ತಿದೆ. ಸಾರ್ವಜನಿಕರ ನೆಮ್ಮದಿ ಕದಡುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ನ್ಯಾಯಪೀಠ ಒತ್ತಿಹೇಳಿದೆ.

ನಿರ್ದಾಕ್ಷಿಣ್ಯ ಜಪ್ತಿ ಕಾರ್ಯಾಚರಣೆಗೆ ಸೂಚನೆ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿ ಯಾರಾದರೂ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಸೌಂಡ್ ಸಿಸ್ಟಮ್, ಆಂಪ್ಲಿಫೈಯರ್, ಲೌಡ್ಸ್ಪೀಕರ್ ಮತ್ತು ಡಿಜೆಗಳನ್ನು ಬಳಸಿದರೆ, ಪೊಲೀಸರು ಯಾವುದೇ ಮುಲಾಜಿಲ್ಲದೆ ತಕ್ಷಣವೇ ಆ ಉಪಕರಣಗಳನ್ನು ಮುಟ್ಟುಗೋಲು (Seize) ಹಾಕಿಕೊಳ್ಳಬೇಕು. ಕೇವಲ ಉಪಕರಣಗಳ ಜಪ್ತಿ ಮಾತ್ರವಲ್ಲದೆ, ಇಂತಹ ಕಾರ್ಯಕ್ರಮಗಳ ಆಯೋಜಕರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಪೊಲೀಸ್ ಇಲಾಖೆಗೆ ಜವಾಬ್ದಾರಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ವಹಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ, ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ನಿಯಮ ಉಲ್ಲಂಘನೆಯಾಗುತ್ತಿರುವುದು ಕಂಡುಬಂದರೂ ಪೊಲೀಸರು ನಿರ್ಲಕ್ಷ್ಯ ತೋರಿದರೆ, ಅಂತಹ ಅಧಿಕಾರಿಗಳ ವಿರುದ್ಧವೂ ನ್ಯಾಯಾಲಯದ ನಿಂದನೆ ಅಡಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
