ಚೆನ್ನೈ: ಆಗಸ್ಟ್ 15 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳು ಮೂಲದ ಮೂವರು ಮೃತಪಟ್ಟಿದ್ದು, ಈ ವಿಚಾರ ಇದೀಗ ಉಭಯ ರಾಜ್ಯಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಘಟನೆಯು ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಉನ್ನತ ಮಟ್ಟದ ತನಿಖೆಗೆ ಪಟ್ಟು ಹಿಡಿದಿವೆ
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗುಂಡಿನ ಸದ್ದು
ಗುಂಡಿನ ದಾಳಿಯಲ್ಲಿ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಎಂಬ ಮೂವರು ಮೃತಪಟ್ಟಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ (AIADMK) ಹಾಗೂ ಇತರ ನಾಯಕರು, ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ್ದು, ಸಿಬಿಐ (CBI) ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಿಎಂ ವಿಜಯ್ ಖಂಡನೆ ಮತ್ತು ಪರಿಹಾರದ ಭರವಸೆ
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಕರ್ನಾಟಕ ಅರಣ್ಯ ಇಲಾಖೆ ನೀಡುತ್ತಿರುವ ‘ಸ್ವರಕ್ಷಣೆ’ಯ ವಿವರಣೆ ಸ್ವೀಕಾರಾರ್ಹವಲ್ಲ ಮತ್ತು ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ತಮಿಳುನಾಡು ಅರಣ್ಯ ಸಚಿವ ಆರ್.ವಿ. ರಂಜಿತ್ ಕುಮಾರ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ .
ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಬೇಡ ಎಂದ ಡಿಕೆಶಿ
ತಮಿಳುನಾಡು ನಾಯಕರ ಹೇಳಿಕೆಗಳಿಗೆ ಕರ್ನಾಟಕ ಸರ್ಕಾರ ಕಠಿಣ ತಿರುಗೇಟು ನೀಡಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸುತ್ತಾ, “ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಒಂದು ರಾಜ್ಯದ ಆಡಳಿತದಲ್ಲಿ ಮತ್ತೊಂದು ರಾಜ್ಯವು ಹಸ್ತಕ್ಷೇಪ ಮಾಡಬಾರದು” ಎಂದು ಎಚ್ಚರಿಸಿದ್ದಾರೆ. ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಪೂರ್ಣ ಮಾಹಿತಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
ಕರ್ನಾಟಕ ಅರಣ್ಯ ಇಲಾಖೆಯ ಪ್ರಕಾರ, ಆಗಸ್ಟ್ 14ರ ರಾತ್ರಿ ದಟ್ಟಾರಣ್ಯದಲ್ಲಿ ಶಂಕಿತ ಬೇಟೆಗಾರರು ಅಕ್ರಮವಾಗಿ ಪ್ರವೇಶಿಸಿದ್ದರು. ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಸ್ವರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಜಿಂಕೆ ಮಾಂಸ ಪತ್ತೆಯಾಗಿದೆ ಎಂದು ಇಲಾಖೆ ಸಮರ್ಥಿಸಿಕೊಂಡಿದೆ. ಆದರೆ, ಮೃತರ ಕುಟುಂಬಸ್ಥರು, “ಅವರು ಕಳೆದುಹೋದ ಜಾನುವಾರುಗಳನ್ನು ಹುಡುಕಲು ಅರಣ್ಯಕ್ಕೆ ತೆರಳಿದ್ದರು, ಅವರ ಬಳಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ” ಎಂದು ವಾದಿಸುತ್ತಿದ್ದಾರೆ.
ಎರಡೂ ರಾಜ್ಯಗಳ ನಡುವೆ ಈ ಸೂಕ್ಷ್ಮ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಮ್ಯಾಜಿಸ್ಟೀರಿಯಲ್ ತನಿಖೆಯ ವರದಿ ಬಂದ ಬಳಿಕವಷ್ಟೇ ಘಟನೆಯ ನೈಜ ಸತ್ಯಾಂಶ ಹೊರಬರಬೇಕಿದೆ.
