ಬೆಂಗಳೂರು :ನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಹೋರಾಟಕ್ಕಿಳಿದಾಗ ಕನ್ನಡ ಚಿತ್ರರಂಗ ಸದಾ ಅವರ ಬೆನ್ನಿಗೆ ನಿಲ್ಲುತ್ತದೆ. ವರನಟ ಡಾ.ರಾಜ್‌ಕುಮಾರ್ ಅವರು ಅಂದೇ ನಮಗೆ ಈ ಜವಾಬ್ದಾರಿಯನ್ನು ಹೊರಿಸಿದ್ದು, ಅವರ ಮಾರ್ಗದರ್ಶನದಂತೆ ಅನ್ನದಾತರ ಪರವಾಗಿ ಚಿತ್ರರಂಗ ನಿಲ್ಲಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷೆ ಜಯಮಾಲಾ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಡಾ.ರಾಜ್‌ಕುಮಾರ್ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆ ಹಾಗೂ ರೈತರ ವಿಚಾರದಲ್ಲಿ ಸ್ಯಾಂಡಲ್‌ವುಡ್ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅದೇ ಹಾದಿಯಲ್ಲಿ ನಾವೂ ಸಾಗಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರು ಈ ನಾಡಿನ ಬೆನ್ನೆಲುಬು. ಅವರು ಬೆಳೆದ ಅನ್ನವನ್ನು ತಿನ್ನುವ ಪ್ರತಿಯೊಬ್ಬರೂ ರೈತರ ಪರವಾಗಿ ನಿಲ್ಲುವುದು ಆದ್ಯ ಕರ್ತವ್ಯ. ಅಣ್ಣಾವ್ರು ಹಾಕಿಕೊಟ್ಟ ಪರಂಪರೆಯನ್ನು ಇಂದಿನ ಪೀಳಿಗೆಯ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ಚಿತ್ರರಂಗ ಮುಂದುವರಿಸಿಕೊಂಡು ಹೋಗಲಿದೆ. ರೈತರ ಯಾವುದೇ ನ್ಯಾಯಯುತ ಹೋರಾಟಗಳಿದ್ದರೂ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸಮಸ್ತ ಚಿತ್ರರಂಗ ಅವರ ಜೊತೆಗೂಡಿ ಹೆಜ್ಜೆ ಹಾಕಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿತ್ರರಂಗವೂ ಗಂಭೀರವಾಗಿ ಚಿಂತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅನ್ನದಾತರ ಧ್ವನಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಚಿತ್ರೋದ್ಯಮ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದೆ ಎಂಬ ಸಂದೇಶವನ್ನು ಜಯಮಾಲಾ ಅವರು ಈ ಮೂಲಕ ರವಾನಿಸಿದ್ದಾರೆ.

Leave a Reply

Your email address will not be published. Required fields are marked *