ವಿಜಯಪುರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಪರಸ್ಪರ ಪಕ್ಷಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಘಟನೆಗಳ ಬಗ್ಗೆ ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಒಂದು ರಾಜಕೀಯ ಪಕ್ಷ, ಮತ್ತೊಂದು ಪಕ್ಷದ ಕಚೇರಿಯ ಬಳಿ ತೆರಳಿ ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸರಿಯಾದ ನಡೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಈ ಹಿಂದೆ ಪದೇ ಪದೇ ಬಿಜೆಪಿ ಕಚೇರಿ ಮುಂದೆ ಬಂದು ಪ್ರತಿಭಟನೆ ಮಾಡುತ್ತಿದ್ದರು. ಆಗ ಎಂದೂ ಬಿಜೆಪಿಯವರು ಈ ರೀತಿಯ ಕೃತ್ಯಕ್ಕೆ ಮುಂದಾಗಿರಲಿಲ್ಲ. ಆದರೆ ಈಗ ಅದಕ್ಕೆ ಪ್ರತ್ಯುತ್ತರ ಹೇಗೆ ಕೊಡಬೇಕು ಎಂಬುದನ್ನು ನಮ್ಮವರು ತೋರಿಸಿಕೊಟ್ಟಿದ್ದಾರೆ. ಏನೇ ಆದರೂ, ಶಾಂತಿಯುತವಾಗಿ ಪ್ರತಿಭಟನೆ ಮಾಡುವವರಿಗೆ ಸೂಕ್ತ ರಕ್ಷಣೆ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಶಾಸಕರ ಮೇಲೆ ಮೊಟ್ಟೆ ಎಸೆತಕ್ಕೆ ಖಂಡನೆ:

    ಇದೇ ವೇಳೆ ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಇತ್ತೀಚೆಗೆ ನಡೆದ ಮೊಟ್ಟೆ ಎಸೆತದ ಘಟನೆಯನ್ನು ಯತ್ನಾಳ್ ತೀವ್ರವಾಗಿ ಖಂಡಿಸಿದರು. “ರಾಜಕೀಯದಲ್ಲಿ ಕೆಲವರು ಹೊಂದಾಣಿಕೆ (ಅಡ್ಜೆಸ್ಟ್‌ಮೆಂಟ್) ಮಾಡಿಕೊಂಡಿರುತ್ತಾರೆ. ಅಂಥವರಿಗೆ ಯಾರೂ ಏನೂ ತೊಂದರೆ ಮಾಡುವುದಿಲ್ಲ. ಆದರೆ ಜನಪರವಾಗಿರುವವರ ಮೇಲೆ ಇಂತಹ ದಾಳಿಗಳಾಗುತ್ತವೆ. ಶಾಸಕರ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳನ್ನು ಪೊಲೀಸರು ಈ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಜನಪ್ರತಿನಿಧಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಭದ್ರತೆ ಒದಗಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಎಂದು ಯತ್ನಾಳ್ ಎಚ್ಚರಿಸಿದ್ದಾರೆ.

    Leave a Reply

    Your email address will not be published. Required fields are marked *