ವಯನಾಡ್ (ಕೇರಳ): ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ನಡೆದ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ಪ್ರದೇಶದ ಭೀಕರ ಕುಸಿತದ ಸ್ಥಳದಲ್ಲಿ ದುರಂತದ ತೀವ್ರತೆ ಹೆಚ್ಚಾಗಿದೆ. ಗುರುವಾರ ನಡೆಸಲಾದ ಬಿರುಸಿನ ರಕ್ಷಣಾ ಕಾರ್ಯಾಚರಣೆಯ ವೇಳೆ ಮತ್ತೊಂದು ನದಿಯ ದಡ ಹಾಗೂ ಅವಶೇಷಗಳ ಅಡಿಯಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರೊಂದಿಗೆ ದುರಂತದಲ್ಲಿ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಆನಕ್ಕಂಪೋಯಿಲ್-ಮೆಪ್ಪಾಡಿ ಜೋಡಿ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜುಲೈ 7ರಂದು ಭಾರಿ ಮಣ್ಣಿನ ಕುಸಿತ ಸಂಭವಿಸಿತ್ತು. ಭಾರಿ ಮಳೆಯ ನಡುವೆಯೂ ಎನ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಮೂರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮೃತರ ಗುರುತು ಪತ್ತೆ: ಗುರುವಾರ ಪತ್ತೆಯಾದ ಮೃತದೇಹಗಳನ್ನು ಹಿಮಾಚಲ ಪ್ರದೇಶದ ಇಂಜಿನಿಯರ್ ರಾಹುಲ್ ಶರ್ಮಾ, ಉತ್ತರ ಪ್ರದೇಶದ ಸರ್ವೇಯರ್ ಅಜಹರುದ್ದೀನ್ ಅನ್ಸಾರಿ ಮತ್ತು ಬಿಹಾರದ ಹಿಟಾಚಿ ಆಪರೇಟರ್ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಹೊರರಾಜ್ಯದ ಕಾರ್ಮಿಕರಾಗಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವೈತಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆಸಿ, ನಂತರ ಕೋಜಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ರಕ್ಷಣೆ ಮಾಡಿ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನೂ ಇಬ್ಬರು ನಾಪತ್ತೆ – ಮುಂದುವರಿದ ಶೋಧ: ದುರಂತದ ಬಳಿಕ ಇಬ್ಬರು ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ನದಿ ಪಾತ್ರ ಮತ್ತು ಮಣ್ಣಿನ ರಾಶಿ ಬಿದ್ದಿರುವ ವಲಯಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಈ ಘಟನೆಯಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ ಏಳು ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಇರಿಸಲಾಗಿದೆ.
‘ಇದು ಮಾನವ ನಿರ್ಮಿತ ದುರಂತ’ – ಸರ್ಕಾರದ ಆಕ್ರೋಶ: ಈ ಭೀಕರ ಘಟನೆಯ ಬಗ್ಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಈ ದುರಂತದ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ಮಣ್ಣನ್ನು ರಾಶಿ ಹಾಕಿದ್ದರಿಂದಲೇ ಇಷ್ಟು ದೊಡ್ಡ ದುರಂತ ಸಂಭವಿಸಿದೆ ಎಂದು ಸರ್ಕಾರಿ ವಲಯದಿಂದ ಆಕ್ರೋಶ ಕೇಳಿಬಂದಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
