ಇಂಡಿಯಾ ದೇಶಕ್ಕೆ ಆರ್ಯರು ಬರುವುದಕ್ಕಿಂತ ಹಿಂದೆ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇರಲಿಲ್ಲ. ಇಲ್ಲಿನ ಮೂಲ ನಿವಾಸಿಗಳಾದ ಆದಿವಾಸಿ, ಅಲೆಮಾರಿ, ಬುಡಕಟ್ಟು ಜನಾಂಗದವರು ಕಾಡು ಮೇಡುಗಳಲ್ಲಿ ವಾಸಿಸುತ್ತಾ, ನಿಸರ್ಗಕ್ಕೆ ಹಾನಿ ಮಾಡದೆ ಮತ, ಧರ್ಮಗಳ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತಿ ಮನುಷ್ಯರ ಹತ್ಯಾಕಾಂಡ ಮಾಡದೆ ಬದುಕುತ್ತಿದ್ದರು. ಆರ್ಯ ಜನಾಂಗದವರು ಇಲ್ಲಿಗೆ ಬಂದ ನಂತರ ಇಲ್ಲಿನ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡು, ತಮ್ಮ ಸೇವೆ ಮಾಡಲು ಶೂದ್ರರು ಹುಟ್ಟಿದ್ದಾರೆ, ನಾವು ದೇವರಿಗೆ ಸಮನಾದವರು, ನಮ್ಮ ಸೇವೆ ಮಾಡಿದರೆ ದೇವರ ಸೇವೆ ಮಾಡಿದ ಹಾಗೆಂದು ಸುಳ್ಳು ಕಥೆಗಳನ್ನು ಕಟ್ಟಿದರು. ತಮ್ಮ ಜಾತಿಯೇ ಶ್ರೇಷ್ಠ, ಇದರ ಪಾವಿತ್ರತೆಯನ್ನು ಕಾಪಾಡಿ ಕೊಳ್ಳಬೇಕೆಂದು ತಮ್ಮದೇ ಆದ ಆಚರಣೆಗಳನ್ನು ಜಾರಿಗೆ ತಂದರು. ತಮ್ಮ ಜಾತಿ ವಿನಾಶವಾಗಬಾರದೆಂದು ಸ್ವಗೋತ್ರ ವಿವಾಹ ಪದ್ದತಿಯನ್ನು ಜಾರಿಗೆ ತಂದರು. ಈ ರೀತಿಯಲ್ಲಿ ಅನೇಕ ಜಾತಿಗೆ ಸಂಬಂಧಿಸಿದ ಆನೇಕ ಅಮಾನವೀಯ ಮೌಢ್ಯಾಚರಣೆಯನ್ನು ಆಚರಿಸುವ ಮೂಲಕ ಜಾತಿಯನ್ನು ಜೀವಂತವಾಗಿ ಇರುವಂತೆ ನೋಡಿಕೊಂಡು ಬಂದಿದ್ದಾರೆ. ಈ ಜೀವ ವಿರೋಧಿ ನಿಲುವಿನ ವಿರುದ್ಧ ಹೋರಾಟ ಮಾಡಿ ಸಮಾನತೆ ಬಯಸುವ ಜನರನ್ನು ರಾಕ್ಷಸ ಕುಲದವರೆಂದು, ಸಮಾಜದೆದುರು ವಿಲನ್ ಗಳನ್ನಾಗಿ ಚಿತ್ರಿಸಿ, ಅವರಿಗೆ ಚಿತ್ರ ಹಿಂಸೆಯನ್ನೂ ಕೊಟ್ಟಿದ್ದಾರೆ.
ಜಾತಿಗಣತಿಯ ಇತಿಹಾಸ

ಭಾರತ ಜಾತಿ ಆಧಾರಿತ ದೇಶ ಆಗಿರುವುದರಿಂದ, ಇಲ್ಲಿನ ಸರ್ಕಾರಗಳು ಏನೇ ಅಭಿವೃದ್ಧಿ ಮಾಡಬೇಕಾದರೂ, ಜಾತಿ ಆಧಾರಿತವಾಗಿಯೇ ನೋಡಬೇಕು. ಈ ದೇಶದ ಸಾಮಾಜಿಕ ಆರ್ಥಿಕ ವ್ಯವಸ್ಥೆಯನ್ನು ನೋಡುವಾಗ, ಸಾವಿರಾರು ಎಕರೆ ಭೂಮಿಯನ್ನು ಹೊಂದಿರುವ ಭೂ ಮಾಲಿಕರು ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಪೌರೋಹಿತ್ಯ ಒಂದು ಜಾತಿಗೆ ಸೀಮಿತ. ರೈಲ್ವೆ ಕಂಬಿಗಳ ಮೇಲಿನ ಮತ್ತು ಕಕ್ಕಸ್ಸು ಗುಂಡಿಯಲ್ಲಿನ ಮನುಷ್ಯನ ತ್ಯಾಜ್ಯವನ್ನು ತೆಗೆದು, ಸ್ವಚ್ಛಗೊಳಿಸುವ ಕೆಲಸ ಮಾತ್ರ ಜಾಡಮಾಲಿಗೆ ಮಾತ್ರ ಸೀಮಿತ. ವ್ಯಾಪಾರ ಕೇವಲ ವೈಷ್ಯನಿಗೆ ಮಾತ್ರ ಅನ್ನುವಂತಿದೆ. ದೇಶದ ಪ್ರತಿಷ್ಠಿತ ಕ್ಷೇತ್ರಗಳೆಲ್ಲವೂ ಮೇಲ್ಜಾತಿಯವರಿಗೆ ಮಾತ್ರ ಅನ್ವಯ ಎಂಬ ಅಲಿಖಿತ ಶಾಸನ ಜಾರಿಯಲ್ಲಿದೆ. ಇಂತಹ ವ್ಯವಸ್ಥೆಯ ಭಾರತವನ್ನು ಜಾತಿ ಆಧಾರಿತ ದೇಶದ ಅನ್ನದೇ ಇನ್ನೇನು ಅನ್ನಬೇಕು?

ಇಂತಹ ತಾರತಮ್ಯದ ಜಾಡ್ಯವನ್ನು ತೊಲಗಿಸಬೇಕೆಂದು ಪಣತೊಟ್ಟು ಎಲ್ಲರಿಗೂ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕೊಡಬೇಕೆನ್ನುವ ಆಶಯವನ್ನುಟ್ಟುಕೊಂಡು, ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದ ಶಾಹು ಮಹಾರಾಜ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಇವರಿಬ್ಬರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಮಹಾನ್ ಚೇತನಗಳು ಇದರ ಮುಂದುವರಿದ ಭಾಗವಾಗಿ 1931ರಲ್ಲಿ ಬ್ರಿಟಿಷ್ ಸರ್ಕಾರ ಜಾತಿವಾರು ಜನಗಣತಿ ನಡೆಸಿ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟಿತು. ಅಂದಿನ ಅಂಕಿ ಅಂಶಗಳಲ್ಲಿಯೇ ಇಲ್ಲಿ ದಲಿತ , ಹಿಂದುಳಿದ, ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಜನಾಂಗದವರೇ ಹೆಚ್ಚಾಗಿರುವುದೇ ಕಂಡು ಬರುತ್ತದೆ.
ಸ್ವಾತಂತ್ರ್ಯ ಬಂದ ನಂತರ ನಮ್ಮ ಒಕ್ಕೂಟ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸುತ್ತಾ ಬಂದಿದೆ. ಆದರೆ ಜಾತಿವಾರು ಜನಗಣತಿಯನ್ನು ನಡೆಸುತಿಲ್ಲ. ಜಾತಿಗಣತಿ ಮಾಡುವುದು ದೇಶ ದ್ರೋಹದ ಕೆಲಸ ಎನ್ನುವ ರೀತಿಯಲ್ಲಿ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಭಾರತ ಸಂವಿಧಾನದಲ್ಲಿ, ದೇಶದಲ್ಲಿನ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಹಾಗೂ ಅವರ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಆಯೋಗಗಳ ಮೂಲಕ ಸಮೀಕ್ಷೆ ನಡೆಸಿ, ಪ್ರಾತಿನಿಧ್ಯ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದ್ದರೂ, 70 ವರ್ಷ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಅದರ ಕಡೆ ಗಮನವನ್ನೇ ಕೊಡದೆ, ಬ್ರಾಹ್ಮಣ್ಯದ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬಂದದ್ದು ದೇಶದ ಶೋಷಿತ ಸಮುದಾಯಗಳಿಗೆ ಮಾಡಿದ ಮಹಾದ್ರೋಹ.
2022ರಲ್ಲಿ ಬಿಹಾರ ರಾಜ್ಯದಲ್ಲಿ ಜಾತಿವಾರು ಜನಗಣತಿ ಆರಂಭ

ಸಂವಿಧಾನದ ಮೂಲ ಬೇರುಗಳಾದ ಸಮಾನತೆ, ಸಾಮಾಜಿಕ ನ್ಯಾಯ ತತ್ವಗಳಿಗೆ ವಿರುದ್ದವಾಗಿರುವ ಬಿ.ಜೆ.ಪಿ ಬೆಂಬಲ ಪಡೆದು, ಸರ್ಕಾರ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ತನ್ನ ಸಾಮಾಜಿಕ ನ್ಯಾಯದ ಬದ್ದತೆಯನ್ನು ಕಿಂಚಿತ್ತೂ ಕಳೆದುಕೊಳ್ಳದೆ, ಜಾತಿವಾರು ಜನಗಣತಿಯನ್ನು ಘೋಷಣೆ ಮಾಡಿಯೇ ಬಿಟ್ಟರು. ಜಾತಿವಾರು ಜನಗಣತಿಯನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೆಟ್ಟಿಲೇರಿದರು. ಒಮ್ಮೆ ಪಾಟ್ನ ಹೈಕೋರ್ಟ್ ಬಿಹಾರದ ಜಾತಿವಾರು ಜನಗಣತಿಗೆ ತಡೆಯಾಜ್ಞೆ ನೀಡಿ, ನಂತರ ತೆರವು ಗೊಳಿಸಿತು. ಇದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಗೂ ಹೋಗಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದ ನಿತೀಶ್ ಕುಮಾರ್ ಅವರು ತನಗೆ ಸಂವಿಧಾನದ ನೀಡಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ದಿಟ್ಟತನದಿಂದ ಕೇವಲ ಒಂದೇ ವರ್ಷದಲ್ಲಿ ಜಾತಿವಾರು ಜನಗಣತಿ ನಡೆಸಿ, ಅದರ ಅಂಕಿ ಅಂಶಗಳನ್ನು ಬಿಹಾರ ರಾಜ್ಯದ ಜನರ ಮುಂದೆ ತೆರೆದಿಟ್ಟಿದ್ದಾರೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನಿತೀಶ್ ಕುಮಾರ್ ಅವರ ತೀರ್ಮಾನ ಐತಿಹಾಸಿಕ ಮತ್ತು ಇಡೀ ದೇಶಕ್ಕೆ ಮಾದರಿ.
ಜಾತಿ ನಿವಾರಣೆಗಾಗಿ ಜಾತಿಗಣತಿ ಆಗಬೇಕು
ಒಬ್ಬ ಬಡವನಿಗೆ ಅಧಿಕ ಹಣಕಾಸು ನೀಡಿ ಶ್ರೀಮಂತನನ್ನಾಗಿ ಮಾಡಬಹುದು. ಆದರೆ ಅವನಲ್ಲಿರುವ ಸಾಮಾಜಿಕ ಹಿಂದುಳಿದಿರುವಿಕೆಯ ಬಡತನವನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ಜಾತಿ ವಿನಾಶ ಮಾಡಬೇಕು. ಜಾತಿ ವಿನಾಶ ಮಾಡಬೇಕಾದರೆ ಯಾವ ಜಾತಿ ಸಾಮಾಜಿಕವಾಗಿ ಯಾವ ಹಂತದಲ್ಲಿದೆ, ಆ ಸಮಾಜಕ್ಕೆ ಎಷ್ಟು ಪ್ರಮಾಣದ ಪ್ರಾತಿನಿಧ್ಯ ಕೊಡಬೇಕೆನ್ನುವುದನ್ನು ಕಂಡುಕೊಳ್ಳುವ ಮುಲೋದ್ದೇಶದಿಂದ ಜಾತಿವಾರು ಜನಗಣತಿ ಆಗಲೇಬೇಕು.
ಕರ್ನಾಟಕದಲ್ಲಿ ಜಾತಿವಾರು ಜನಗಣತಿ

ಕರ್ನಾಟಕದಲ್ಲಿ 2015ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರ ಜಾತಿವಾರು ಜನಗಣತಿ ನಡೆಸುವ ಐತಿಹಾಸಿಕ ನಿರ್ಧಾರ ಪ್ರಕಟಿಸಿ, ರಾಜ್ಯಹಿಂದುಳಿದ ವರ್ಗಗಳ ಆಯೋಗಕ್ಕೆ ಗಣತಿ ಮಾಡುವ ಜವಾಬ್ದಾರಿ ವಹಿಸಲಾಯಿತು. ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ನೇತೃತ್ವದಲ್ಲಿ ಇಡೀ ರಾಜ್ಯದ ಪ್ರತಿಯೊಂದು ಮನೆಗೂ ಭೇಟಿ ನೀಡಿ, ರಾಜ್ಯದ ಜನರ ಜಾತಿವಾರು ಮಾಹಿತಿಯನ್ನು ಸಂಗ್ರಹಿಸಿದ್ದು, ಮೂಲ ಮಾಹಿತಿ ಪ್ರಕಾರ 2017ರಲ್ಲಿ ವರದಿ ಸಿದ್ದಗೊಂಡರೂ ಕಾಂತರಾಜ್ ಅವರು ಸರ್ಕಾರಕ್ಕೆ ಏಕೆ ವರದಿ ಸಲ್ಲಿಸಲಿಲ್ಲ ಎನ್ನುವ ಪ್ರಶ್ನೆ ನಮ್ಮಂತಹ ಅನೇಕ ಜನರನ್ನು ಕಾಡುತ್ತಿದೆ.
ರಾಹುಲ್ ಗಾಂಧಿಯವರು ಜಾತಿವಾರು ಜನಗಣತಿಯ ಅಗತ್ಯವನ್ನು ಹೇಳುತ್ತಾ, ತಮ್ಮ ಸರ್ಕಾರ ಬಂದರೆ ಇಡೀ ದೇಶದಲ್ಲಿ ಜಾತಿವಾರು ಜನಗಣತಿ ಮಾಡಿಸುತ್ತೇವೆಂದು ಘೋಷಣೆ ಮಾಡಿದ್ದಾರೆ. ಇಂಡಿಯಾ ಒಕ್ಕೂಟದ ಎಲ್ಲಾ ರಾಜಕೀಯ ಪಕ್ಷಗಳೂ ಜಾತಿವಾರು ಜನಗಣತಿಯ ಪರವಾಗಿದ್ದಾವೆ. ಅಖಿಲ ಭಾರತೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರ ಬೆಂಬಲವೂ ಇದೆ. ಇಂತಹ ಸುವರ್ಣ ಅವಕಾಶವನ್ನು ಬಳಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿವಾರು ಜನಗಣತಿಯನ್ನು ಪಡೆದು ಬಹಿರಂಗ ಮಾಡಿ ನಿತೀಶ್ ಕುಮಾರ್ ಅವರು ತುಳಿದ ದಿಟ್ಟ ಹಾದಿಯಲ್ಲಿ ನಡೆಯುತ್ತಾರೆಯೇ? ಎಂಬುದು ಸದ್ಯದ ಕುತೂಹಲ.