ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ಸಚಿವ ಸ್ಥಾನದ ರೇಸ್‌ನಲ್ಲಿದ್ದ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಮಂತ್ರಿಗಿರಿ ಕೈತಪ್ಪಿರುವುದು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ತನ್ವೀರ್ ಸೇಠ್ ಅವರನ್ನು ಕಡೆಗಣಿಸಿರುವುದು ಅಭಿಮಾನಿಗಳ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ಮೈಸೂರಿನಲ್ಲಿರುವ ಶಾಸಕರ ನಿವಾಸದ ಮುಂದೆ ಜಮಾಯಿಸಿದ ನೂರಾರು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು, ಹೈಕಮಾಂಡ್ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜೀನಾಮೆಗೆ ಬಿಗಿಪಟ್ಟು:

“ಪಕ್ಷಕ್ಕಾಗಿ ದಶಕಗಳಿಂದ ದುಡಿದ ನಿಷ್ಠಾವಂತರಿಗೆ ಅನ್ಯಾಯ ಮಾಡಲಾಗಿದೆ. ನಿನ್ನೆ-ಮೊನ್ನೆ ಪಕ್ಷಕ್ಕೆ ಬಂದವರಿಗೆ ಹಾಗೂ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆ ಮಣೆ ಹಾಕಲಾಗುತ್ತಿದೆ” ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ಹೊರಹಾಕಿದರು. ಇದೇ ವೇಳೆ, ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ತನ್ವೀರ್ ಸೇಠ್ ಅವರ ಮೇಲೆ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ.

ಮೈಸೂರು ಹಾಗೂ ಮಂಡ್ಯ ಭಾಗದಲ್ಲಿಯೂ ರಸ್ತೆ ತಡೆದು ಪ್ರತಿಭಟನೆಗಳು ನಡೆದಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಅಭಿಮಾನಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೋರ್ವ ವಿಷ ಸೇವಿಸಿ ಆಸ್ಪತ್ರೆ ಸೇರಿದ ಘಟನೆಯೂ ವರದಿಯಾಗಿದೆ.

ಬೆಂಗಳೂರಿನತ್ತ ತನ್ವೀರ್ ಸೇಠ್ ಹಾಗೂ ಬೆಂಬಲಿಗರು:

ಬೆಂಬಲಿಗರ ಈ ತೀವ್ರತರವಾದ ಒತ್ತಡ ಹಾಗೂ ಭಾವನಾತ್ಮಕ ಆಗ್ರಹದ ನಡುವೆ, ಶಾಸಕ ತನ್ವೀರ್ ಸೇಠ್ ಅವರು ಮುಂದಿನ ರಾಜಕೀಯ ನಡೆ ನಿರ್ಧರಿಸಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಅಭಿಮಾನಿಗಳ ಬೇಡಿಕೆ ಹಾಗೂ ಕ್ಷೇತ್ರದ ಜನತೆಯ ಭಾವನೆಗಳನ್ನು ರಾಜ್ಯ ನಾಯಕರ ಮುಂದಿಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ನೂರಾರು ಮುಖಂಡರು ಸಾಮೂಹಿಕ ರಾಜೀನಾಮೆ ನೀಡುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ತಮ್ಮ ಅಸಮಾಧಾನ ತೋಡಿಕೊಳ್ಳಲು ಮುಂದಾಗಿರುವ ಈ ಮುಖಂಡರ ನಡೆ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹೈಕಮಾಂಡ್ ಈ ಬಿಕ್ಕಟ್ಟನ್ನು ಹೇಗೆ ಶಮನ ಮಾಡಲಿದೆ ಮತ್ತು ತನ್ವೀರ್ ಸೇಠ್ ಅವರು ಬೆಂಬಲಿಗರ ಒತ್ತಡಕ್ಕೆ ಮಣಿದು ರಾಜೀನಾಮೆ ಅಸ್ತ್ರ ಪ್ರಯೋಗಿಸುತ್ತಾರೆಯೇ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *