ನವದೆಹಲಿ: ಸುಪ್ರೀಂ ಕೋರ್ಟ್ ನೀಡಿರುವ ಈ ನಿರ್ದೇಶನವು ಕೇವಲ ಸೌಲಭ್ಯಗಳ ಬಗ್ಗೆ ಮಾತ್ರವಲ್ಲದೆ, ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದಲೂ ಪ್ರಮುಖವಾಗಿದೆ.
ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಶಾಲೆಗಳಲ್ಲಿ ಸರಿಯಾದ ಶೌಚಾಲಯ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಸೌಲಭ್ಯವಿಲ್ಲದ ಕಾರಣ ಅರ್ಧಕ್ಕೇ ಶಿಕ್ಷಣ ಮೊಟಕುಗೊಳಿಸುವ ಪ್ರಮಾಣ ಹೆಚ್ಚಿದೆ. ಈ ಆದೇಶವು ‘ಶಿಕ್ಷಣದ ಹಕ್ಕು‘ ಕೇವಲ ದಾಖಲೆಗಳಲ್ಲಿ ಉಳಿಯದೆ, ಪ್ರಾಯೋಗಿಕವಾಗಿ ಜಾರಿಯಾಗಲು ಸಹಕಾರಿಯಾಗುತ್ತದೆ.
ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ಹೆಣ್ಣುಮಕ್ಕಳ ಆತ್ಮವಿಶ್ವಾಸ ಮತ್ತು ಘನತೆಯ ದೃಷ್ಟಿಯಿಂದಲೂ ಅನಿವಾರ್ಯ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.
ಕೋರ್ಟ್ ಕೇಂದ್ರ ಸರ್ಕಾರಕ್ಕೆ ‘ರಾಷ್ಟ್ರೀಯ ಋತುಸ್ರಾವ ನೈರ್ಮಲ್ಯ ನೀತಿ‘ ರೂಪಿಸಲು ಸೂಚಿಸಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ಇರುವ ಸೌಲಭ್ಯಗಳ ತಾರತಮ್ಯವನ್ನು ಹೋಗಲಾಡಿಸಿ, ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದೇ ರೀತಿಯ ಮಾನದಂಡಗಳನ್ನು ತರಲು ಸಹಕಾರಿಯಾಗಲಿದೆ.
