ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಕೃತ್ಯದಲ್ಲಿ ಈಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇದರ ಹಿಂದೆ ಓರ್ವ “ಪ್ರಭಾವಿ ಮಹಿಳೆ”ಯ ಹಸ್ತಕ್ಷೇಪ ಇರುವುದು ಪೊಲೀಸ್ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿದೆ.
ಬೆದರಿಕೆ ಕರೆಯ ಹಿಂದೆ ‘ಮೇಡಂ’ ಕೈವಾಡ!
ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್ ಎಂಬುವವರನ್ನು ಕಿಡ್ನಾಪ್ ಮಾಡಿ, ಕೋರ್ಟ್‌ನಲ್ಲಿ ಹೇಳಿಕೆ ನೀಡದಂತೆ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್, ಸುಹಾಸ್ ಮತ್ತು ವೇಣು ಎಂಬ ಮೂವರನ್ನು ಬಂಧಿಸಿದ್ದರು. ಈ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಎಫ್‌ಎಸ್‌ಎಲ್ ತಪಾಸಣೆಗೆ ಒಳಪಡಿಸಿದಾಗ ಹಲವು ಅಚ್ಚರಿಯ ವಿಚಾರಗಳು ಬಯಲಾಗಿವೆ. ಕೃತ್ಯ ಎಸಗುವ ಮುನ್ನ ಆರೋಪಿ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬಳಿಂದ ಕರೆ ಬಂದಿದ್ದು, ಆಕೆ ನೀಡಿದ ನಿರ್ದೇಶನದಂತೆಯೇ ಆರೋಪಿಗಳು ಸಾಕ್ಷಿಯನ್ನು ಹೆದರಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಯಾರೀ ಪ್ರಭಾವಿ ಮಹಿಳೆ?
ಎಫ್‌ಎಸ್‌ಎಲ್ ವರದಿಯ ಆಧಾರದ ಮೇಲೆ, ಕಾನ್ಫರೆನ್ಸ್ ಕಾಲ್‌ನಲ್ಲಿ ಗೌರವ್ ಶೆಟ್ಟಿ ಮತ್ತು ಕಿರಣ್ ಎಂಬುವವರು ಸಕ್ರಿಯರಾಗಿ ಪುನೀತ್‌ಗೆ ಮಾರ್ಗದರ್ಶನ ನೀಡುತ್ತಿದ್ದರು. ಇವರ ಪಡೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಈ ಮಹಿಳೆಯೇ ನೇರವಾಗಿ ಸೂಚನೆಗಳನ್ನು ನೀಡುತ್ತಿದ್ದಳು ಎಂಬುದು ಕಾಲ್ ರೆಕಾರ್ಡ್ಸ್‌ನಿಂದ ದೃಢಪಟ್ಟಿದೆ. ಆದರೆ, ಆ ಪ್ರಭಾವಿ ಮಹಿಳೆ ಯಾರು? ಆಕೆಯ ಹಿನ್ನೆಲೆ ಏನು? ದರ್ಶನ್ ಪ್ರಕರಣಕ್ಕೂ ಆಕೆಗೂ ಇರುವ ಸಂಬಂಧವೇನು? ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.
ಬಲೆ ಬೀಸಿರುವ ಪೊಲೀಸರು
ಈಗಾಗಲೇ ಲಭ್ಯವಾಗಿರುವ ಎಫ್‌ಎಸ್‌ಎಲ್ ವರದಿಯ ಆಧಾರದ ಮೇಲೆ ಮುಂದಿನ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಈ ಷಡ್ಯಂತ್ರದ ಹಿಂದಿರುವ ಮಾಸ್ಟರ್ ಮೈಂಡ್ ಹಾಗೂ ಆ ಪ್ರಭಾವಿ ಮಹಿಳೆಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿದ್ದಾರೆ. ಸದ್ಯದಲ್ಲೇ ಮತ್ತೊಂದು ತಾಂತ್ರಿಕ ವರದಿ ಪೊಲೀಸರ ಕೈಸೇರಲಿದ್ದು, ಆ ವರದಿ ಬಂದ ಬಳಿಕ ಈಕೆಯ ಸಂಪೂರ್ಣ ಬಣ್ಣ ಬಯಲಾಗುವ ಸಾಧ್ಯತೆಯಿದೆ. ಈ ಹೊಸ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವುದು ನಿಶ್ಚಿತ.
